ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವಾಗಲಿ

20-hvr-03
Published on

ಹಾವೇರಿ: ಮಕ್ಕಳು ಈ ದೇಶದ ಬಹುದೊಡ್ಡ ಆಸ್ತಿ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು ಎಂದು ಎಸ್​ಪಿ ಕೆ.ಜಿ. ದೇವರಾಜ್ ಹೇಳಿದರು.

ನಗರದ ಬಾಲಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಹಾಯವಾಣಿ ಕೇಂದ್ರ-1098, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಚೈಲ್ಡ್​ಲೈನ್ ಸೇ ದೋಸ್ತಿವೀಕ್ ಹಾಗೂ ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ಒಳ್ಳೆಯ ಹಾಗೂ ಕೆಟ್ಟದರ ಗುಣ ಸ್ವಭಾವದ ವ್ಯತ್ಯಾಸದ ಅರಿವು ಮೂಡಿಸುವ ಅಗತ್ಯವಿದೆ. ಪ್ರತಿ ಮಗುವಿಗೆ ಶಿಕ್ಷಣ ನೀಡುವ ಜತೆಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ ಮಾತನಾಡಿ, ಮಕ್ಕಳಿಗೆ ಅಂಗನವಾಡಿ ಮೂಲಕ ಶಾಲಾಪೂರ್ವ ಶಿಕ್ಷಣ ಕೊಡುವ ಮುಖಾಂತರ ಮಾನಸಿಕವಾಗಿ ಹಾಗೂ ದೈಹಿಕವಾಗಿ ತರಬೇತಿ ನೀಡಲಾಗುತ್ತಿದೆ. ಮಕ್ಕಳ ರಕ್ಷಣೆ ಮಾಡುವಲ್ಲಿ ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸೋಣ ಎಂದರು.

ಮಕ್ಕಳ ರಕ್ಷಣಾಧಿಕಾರಿ ಮಲ್ಲಿಕಾರ್ಜುನ ಮಠದ ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಎಸ್.ಎಚ್. ಮಜೀದ್ ಅವರು ಮಕ್ಕಳ ಹಕ್ಕುಗಳ ಕುರಿತು ಮಾತನಾಡಿದರು.

ಮಕ್ಕಳ ಸಹಾಯವಾಣಿಯ ಚೈಲ್ಡ್​ಲೈನ್ ಸೇ ದೋಸ್ತಿ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಮಕ್ಕಳಿಂದ ಅಧಿಕಾರಿಗಳಿಗೆ ಚೈಲ್ಡ್​ಲೈನ್ ಸೇ ದೋಸ್ತಿ ವೀಕ್ ಬ್ಯಾಂಡ್ ಕಟ್ಟಿಸಲಾಯಿತು.

ಟಿಎಚ್​ಒ ಡಾ. ಪ್ರಭಾಕರ ಕುಂದೂರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವಿನಯ ಗುಡದೂರ, ಜ್ಯೋತಿ ಆನಿಶೆಟ್ಟರ್, ಮಂಜುನಾಥ ರಾಯದುರ್ಗದ, ಶಿವಾನಂದಪ್ಪ ಗದಿಗೇರ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net