

ಮಾಗಡಿ : ದೀಪದಂತೆ ಎಲ್ಲರ ಜೀವನವು ಪ್ರಜ್ವಲಿಸಲಿ ಎಂದು ನೆಲಮಂಗಲ ಪವಾಡ ಬಸವಣ್ಣ ದೇವರ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಹೇಳಿದರು.
ತಾಲೂಕಿನ ಸೋಲೂರು ಹೋಬಳಿ ಚಿಲುಮೆ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ತಿಕ ದೀಪೋತ್ಸವ ಹಾಗೂ ಲಿಂಗೈಕ್ಯ ಶ್ರೀ ಬಸವಲಿಂಗ ಸ್ವಾಮೀಜಿ ಅವರ 3ನೇ ಸಂಸ್ಮರಣೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಹಿರಿಯರು ಬಿಟ್ಟು ಹೋಗಿರುವ ಸಂಸ್ಕಾರ, ಮಾರ್ಗದರ್ಶನಗಳು ಜೀವನದ ಮಾರ್ಗಕ್ಕೆ ಬೆಳಕು ಚೆಲ್ಲುವಂತಾಗಿದೆ. ಪೂರ್ವಿಕರ ಕಾಲದಿಂದಲೂ ಕಾರ್ತಿಕ ದೀಪೋತ್ಸವ ನಡೆದುಕೊಂಡು ಬಂದಿದೆ. ಇದೊಂದು ಧಾರ್ಮಿಕ ಪ್ರತಿರೂಪವಾಗಿದೆ. ಭಾರತೀಯರಾದ ನಾವು ಯಾವುದೇ ಶುಭ ಸಮಾರಂಭಗಳಲ್ಲಿ ಪೂಜೆ ಮಾಡಬೇಕಾದರೆ ದೀಪವನ್ನು ಬೆಳಗಿ ನಂತರ ಕಾರ್ಯಕ್ರಮಕ್ಕೆ ಚಾಲನೆ ನೀಡುವುದು ಸಂಪ್ರದಾಯ. ದೀಪದಂತೆ ಎಲ್ಲರ ಜೀವನವು ಪ್ರಜ್ವಲಿಸಲಿ ಎಂಬುದು ಇದರ ಅರ್ಥ ಎಂದರು.
ಅಕ್ಷರ, ದಾಸೋಹ, ವಸತಿಗೆ ಪೂರಕವಾದ ನಾಡಿನ ಮಠಮಾನ್ಯಗಳ ಸೇವೆ ಅಮೂಲ್ಯವಾಗಿದೆ.ಕರ್ನಾಟದ ಲಿಂಗಾಯತ ಮಠಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿವೆ. ಈ ಮಠಗಳು ಇಲ್ಲದಿದ್ದರೆ ಲಕ್ಷಾಂತರ ಮಂದಿ ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಮಠ ಕಟ್ಟುವುದು ಸುಲಭದ ಮಾತಲ್ಲ, ದಿಸೆಯಲ್ಲಿ ಚಿಲುಮೆ ಮಠ ಚಾರಿತ್ರಿಕತೆ ಹೊಂದಿದೆ ಎಂದರು.
ಟ್ರಸ್ಟ್‌ನ ಪದಾಧಿಕಾರಿಗಳು ಮುಂದಿನ ಕಾರ್ತಿಕದಿಪೋತ್ಸವದ ಒಳಗೆ ಶ್ರೀಮಠಕ್ಕೆ ಶ್ರೀಗಳನ್ನು ಪಟ್ಟಾಧಿಕಾರ ಮಾಡಿ, ಮಠದ ಅಭಿವೃದ್ಧಿಗೆ ಒತ್ತು ನೀಡಬೇಕು. ಇದಕ್ಕೆ ಸಹಕಾರ ನೀಡಲು ಸಿದ್ಧರಿದ್ದೇವೆ ಎಂದರು.
ಟ್ರಸ್ಟ್‌ನ ಅಧ್ಯಕ್ಷ ಸಿ.ಮಹಂತೇಶ್ ಮಾತನಾಡಿ, ಲಿಂಗೈಕ್ಯ ಶ್ರೀ ಬಸವಲಿಂಗ ಸ್ವಾಮೀಜಿಯವರು ಮಠಕ್ಕೆ ನೀಡಿದ ಸೇವೆ ಅನನ್ಯವಾದದ್ದು, ಸೂರ್ಯ-ಚಂದ್ರ ಇರುವ ತನಕ ಅಚ್ಚ ಅಸಿರಾಗಿರುತ್ತದೆ. ಮಠಗಳಿಗೆ ಭಕ್ತರೇ ದೊಡ್ಡ ಸಂಪತ್ತು ಎಂದರು.
ಟ್ರಸ್‌ನ ಸಹ ಕಾರ್ಯದರ್ಶಿ ಎ.ಆರ್. ಮೃತ್ಯುಂಜಯ ಮಾತನಾಡಿದರು.
ಗೌರವಾಧ್ಯಕ್ಷ ಎಸ್‌ಸಿಬಿಎಸ್. ಶಿವರುದ್ರಯ್ಯ, ಉಪಾಧ್ಯಕ್ಷ ಈಶ್ವರಪ್ಪ, ಕಾರ್ಯದರ್ಶಿ ಚಂದ್ರಶೇಖರಯ್ಯ, ಖಜಾಂಚಿ ಚಂದ್ರಶೇಖರಯ್ಯ, ಟ್ರಸ್ಟಿಗಳಾದ ವಿರೂಪಾಕ್ಷಯ್ಯ, ನಂದೀಶ್, ಕವೀಶ್ವರ, ಚನ್ನಪ್ಪ, ಮಲ್ಲಪ್ಪ ಶೆಟ್ಟಿ, ನಿರಂಜನ್, ತಾವರೆಕರೆ ದಯಾನಂದ್, ಮುಖಂಡರಾದ ಎಸ್‌ಸಿಬಿಎಸ್ ಮಂಜುನಾಥ್, ಕೆ.ಪಿ.ಬೃಂಗೇಶ್, ಮಂಜುನಾಥ್, ರವಿಕುಮಾರ್, ಉಡುಗುಂಟೆ ಮಂಜುನಾಥ್, ಶಿಕ್ಷಕ ಮಂಜುನಾಥ್, ವೀರಭದ್ರಸ್ವಾಮಿ ಇತರರು ಇದ್ದರು.