ಸರ್ಕಾರಿ ಸೌಲಭ್ಯ ಅರ್ಹರಿಗೆ ತಲುಪಲಿ

ಸರ್ಕಾರಿ ಸೌಲಭ್ಯ ಅರ್ಹರಿಗೆ ತಲುಪಲಿ
Published on

ಹಾಸನ: ಸರ್ಕಾರಿ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವುದರ ಜತೆಗೆ ಮೂಲಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಲತಾ ಕುಮಾರಿ ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಅಲ್ಪಸಂಖ್ಯಾತರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಅಮಲುಮುಕ್ತ ಸಮಾಜ ನಿರ್ಮಾಣಕ್ಕಾಗಿ ವಿಶೇಷ ಕಾರ್ಯಾಗಾರ ಆಯೋಜಿಸುವುದು ಅತ್ಯಗತ್ಯ. ಶೀಘ್ರ ಕಾರ್ಯಾಗಾರ ಆಯೋಜಿಸಲು ಕ್ರಮವಹಿಸಲಾಗುವುದು. ಇದಕ್ಕಾಗಿ ಸಮುದಾಯದವರ ಸಹಕಾರ ಅತ್ಯಗತ್ಯ ಎಂದರು.

ನಗರ ವೀಕ್ಷಣೆಗೆ ತೆರಳಿದ್ದ ಸಂದರ್ಭದಲ್ಲಿ ಪೆನ್ಷನ್ ಮೊಹಲ್ಲಾದಂತಹ ಸ್ಥಳಗಳಲ್ಲಿ ಈ ರೀತಿಯ ಸಮಸ್ಯೆಗಳು ಹೆಚ್ಚಾಗಿವೆ ಎಂದು ಸಾರ್ವಜನಿಕರು ಗಮನಕ್ಕೆ ತಂದಿದ್ದಾರೆ. ಇದು ಬಹಳ ಗಂಭೀರವಾದ ಸಮಸ್ಯೆ. ಮಾದಕ ವ್ಯಸನಗಳಿಗೆ ಒಳಗಾಗಿರುವರರನ್ನು ಯಾವ ರೀತಿಯಾಗಿ ಮನಪರಿವರ್ತನೆ ಮಾಡಬೇಕು ಎಂಬುದಾಗಿ ಚರ್ಚಿಸಿ ಕ್ರಿಯಾ ಯೋಜನೆ ಸಿದ್ಧಪಡಿಸುತ್ತಿದ್ದೇವೆ ಎಂದರು.

ಚನ್ನರಾಯಪಟ್ಟಣದ ದೊಡ್ಡ ಮೊಹಲ್ಲಾ ರಸ್ತೆಯಲ್ಲಿರುವ ಜಾಮಿಯಾ ಮಸೀದಿ ಕಮಿಟಿಗೆ ಖಬರಸ್ತಾನ್ ಜಾಗ ಮಂಜೂರು ಮಾಡಿಕೊಡಲು ಸಂಬಂಧಪಟ್ಟ ತಹಸೀಲ್ದಾರ್ ಕ್ರಮವಹಿಸಬೇಕು. ಹೊಳೆನರಸೀಪುರ ತಾಲೂಕಿನ ಕಡವಿನ ಕೋಟೆ ಗ್ರಾಮದ ಖಬರಸ್ತಾನ್‌ದಲ್ಲಿ ಶವಸಂಸ್ಕಾರ ಮಾಡುವ ಸಂದರ್ಭ ರಕ್ಷಣೆ ಒದಗಿಸಬೇಕು ಎಂದು ಪೊಲೀಸ್ ಇಲಾಖೆಗೆ ಸೂಚಿಸಿದರು.

ಅರಕಲಗೂಡಿನ ಕೋಟೆ ಮುಸ್ಲಿಂ ಸಮುದಾಯದ ಖಬರಸ್ತಾನ್‌ಗೆ ಕಾಂಪೌಂಡ್ ನಿರ್ಮಿಸಿಕೊಡಲು ಕ್ರಮವಹಿಸಬೇಕು. ಬೇಲೂರು ತಾಲೂಕಿನ ಅರೇಹಳ್ಳಿ ಗ್ರಾಮದಲ್ಲಿರುವ ಸರ್ವೇ ನಂ.239,241,242ರ ಜಮೀನನ್ನು ಮುಸ್ಲಿಂ ಸಮುದಾಯದವರು ಉಪಯೋಗಿಸಲು ಅಗತ್ಯ ಭದ್ರತೆ ನೀಡಬೇಕು. ಅಲ್ಲದೆ ಸ್ಲೇಟರ್ಸ್ ಸಮುದಾಯ ಭವನದ ಕಟ್ಟಡ ಪೂರ್ಣಗೊಳಿಸಲು ಸೂಚಿಸಿದರಲ್ಲದೆ, ಬಿದರಕ್ಕ ಗ್ರಾಮದ ಖಬರಸ್ತಾನ್‌ಗೆ ಕಾಂಪೌಂಡ್ ನಿರ್ಮಾಣ ಮಾಡಿ ಛಾವಣಿ ಹಾಕಿಸುವುದರ ಜತೆಗೆ ಮದರಸದಲ್ಲಿ ಮುಸ್ಲಿಂ ಮಕ್ಕಳು ಓದುವುದಕ್ಕೆ ಕೊಠಡಿ ನಿರ್ಮಿಸುವಂತೆ ವಕ್ಫ್ ಅಧಿಕಾರಿಗಳಿಗೆ ಸೂಚಿಸಿದರು.

ಬೌದ್ಧ ಧರ್ಮಚಾರಿಗಳಿಗೆ ಮಾಸಾಶನ ನೀಡುವ ಕುರಿತಾಗಿ ಸರ್ಕಾರದ ಮಟ್ಟದಲ್ಲಿ ಸ್ಪಷ್ಟನೆ ತೆಗೆದುಕೊಂಡು ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಬೇಕು. ಬ್ಯಾರಿ ಸಮುದಾಯಕ್ಕೆ ಭಾಷಾ ಅಲ್ಪಸಂಖ್ಯಾತರ ದೃಢೀಕರಣ ಪತ್ರ ನೀಡುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಗುಳಗಳಲೆ ಗ್ರಾಮದ ಜುಮಾ ಮಸೀದಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿ ಕ್ರಮಕೈಗೊಳ್ಳಬೇಕು. ನೂರಕ್ಕಿ ಗ್ರಾಮದ ಜಾಮಿಯಾ ಮಸೀದಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಶೌಚಗೃಹ ಛಾವಣಿಯ ಅವಶ್ಯವಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕ್ರಮವಹಿಸಬೇಕು ಎಂದು ಹೇಳಿದರು.

ವಿಶ್ವನಾಥನಗರದಲ್ಲಿ ಮೂಲಸೌಕರ್ಯಗಳ ಕೊರತೆಯಿದೆ. ಹಾಗಾಗಿ ಅಲ್ಲಿಗೆ ಸೌಕರ್ಯಒದಗಿಸಬೇಕಿದೆ. ಮುಂಜಾನೆ ಸಂದರ್ಭದಲ್ಲ್ಲಿ ಆ ನಗರಕ್ಕೆ ಭೇಟಿ ಮಾಡುತ್ತೇನೆ ಎಂದು ಅವರು, ಚಿಕ್ಕನಾಳು ವಾಟರ್ ಟ್ಯಾಂಕ್ ರಸ್ತೆಯಿಂದ ಆದರ್ಶ ನಗರದ ಆರನೇ ಅಡ್ಡರಸ್ತೆಯವರೆಗೆ ಹಂಪ್ಸ್ ಅಳವಡಿಸಬೇಕು ಎಂದು ತಿಳಿಸಿದರು.

ಐಪಿಜಿಆರ್‌ಎಸ್ ತಂತ್ರಾಂಶದಲ್ಲಿ ಸಾರ್ವಜನಿಕರು ದೂರು ಸಲ್ಲಿಸಿದ್ದು, ಆ ಸಮಸ್ಯೆ ಬಗೆಹರಿಯುವುದಕ್ಕಿಂತ ಮುಂಚೆಯೇ ಸಂಬಂಧಪಟ್ಟ ಅರ್ಜಿಯನ್ನು ಮುಕ್ತಾಯಗೊಳಿಸಿರುವುದು ಕಂಡುಬಂದಿದೆ. ಈ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕು. ಅಲ್ಪಸಂಖ್ಯಾತರ ಉರ್ದು ಶಾಲೆಗಳ ಕುರಿತಾಗಿ ಅನೇಕ ಸಮಸ್ಯೆಗಳಿದ್ದು, ಪ್ರತ್ಯೇಕವಾಗಿ ಸಭೆ ಆಯೋಜಿಸಬೇಕು. ಅಲ್ಲದೆ ಅಲ್ಪಸಂಖ್ಯಾತರ ಶಾಲೆಗಳಿಗೆ ಸಾಕಷ್ಟು ಅನುದಾನ ಅಗತ್ಯವಿದ್ದು, ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಪೆನ್ಷನ್ ಮೊಹಲ್ಲಾದಲ್ಲಿ ಯಾವುದೇ ರೀತಿಯ ಎಟಿಎಂ, ಬ್ಯಾಂಕ್ ಸೌಲಭ್ಯವಿಲ್ಲ. ಹಾಗಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಯಾವುದಾದರೊಂದು ಬ್ಯಾಂಕ್‌ನ ಶಾಖೆಯನ್ನು ತೆರೆಯುವುದರ ಜತೆಗೆ ಎಟಿಎಂ ಕೂಡ ತೆರೆಯಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಶ್ರವಣಬೆಳಗೊಳದಲ್ಲಿ ಕೆರೆಗಳ ಅಭಿವೃದ್ಧಿಪಡಿಸುವುದರ ಜತೆಗೆ ಒಳಚರಂಡಿ ದುರಸ್ತಿಯಾಗಬೇಕು. ವಿಂಧ್ಯಗಿರಿ ತಪ್ಪಲು ಮತ್ತು ಶ್ರೀಮಠದ ಹತ್ತಿರ ಸ್ನಾನಗೃಹ ಮತ್ತು ಶೌಚಗೃಹ ನಿರ್ಮಾಣ ಕುರಿತು ಪ್ರವಾಸೋದ್ಯಮ ಇಲಾಖೆ ಗಮನಹರಿಸಬೇಕು. ಇನ್ನು ಶ್ರವಣ ಬೆಳಗೊಳ ಪ್ರವೇಶಿಸುವ ಪ್ರಮುಖ ರಸ್ತೆಗಳಲ್ಲಿರುವ ಮಾಂಸ ಮಾರಾಟದ ಅಂಗಡಿಗಳನ್ನು ತೆರವು ಮಾಡುವ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಅನುಪಾಲನಾ ವರದಿ ನೀಡಬೇಕು ಎಂದು ಸೂಚನೆ ನೀಡಿದರು.

ಆಲೂರಿನ ಸರ್ಕಾರಿ ಉರ್ದು ಶಾಲೆಗೆ ಸೌಲಭ್ಯಗಳನ್ನು ಒದಗಿಸುವ ಸಂಬಂಧ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಜತೆಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳು ಸಹಕರಿಸಬೇಕು. ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸಲು ತಿಳಿಸಿದರು.

ಬೇಲೂರು ತಾಲೂಕಿನ ಬಕ್ಕರವಳ್ಳಿ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ, ರಸ್ತೆ ಕಾಮಗಾರಿ, ಮೌಲಾನ ಆಜಾದ್ ಶಾಲೆಗೆ ಹೊಸ ಕಟ್ಟಡ ನಿರ್ಮಾಣ, ಬಂಟೇನಹಳ್ಳಿಗೆ ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯ ಮಂಜುರಾತಿ, ಬುದ್ಧ ವಿಹಾರಕ್ಕೆ ಜಮೀನು ಮಂಜೂರು, ಬೌದ್ಧ ಧರ್ಮದ ದಮ್ಮಾಚಾರಿಗಳಿಗೆ ಗೌರವಧನ ನೀಡುವ ಕುರಿತು ಹಾಗೂ ಇತರ ವಿಷಯಗಳ ಕುರಿತು ಸ್ವೀಕೃತಗೊಂಡಿದ್ದ ಅಹವಾಲುಗಳನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಎಲ್ಲ ತಾಲೂಕುಗಳ ತಹಸೀಲ್ದಾರ್‌ಗಳು, ಅಧಿಕಾರಿಗಳು, ಸಾರ್ವಜನಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net