

ಗುಂಡ್ಲುಪೇಟೆ: ಚಾಮುಲ್ ಹಾಲು ಉತ್ಪಾದಕರ ಹಿತಾಸಕ್ತಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ರೈತರು ಇವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್ ಹೇಳಿದರು.
ಗುರುವಾರ ತಾಲೂಕಿನ ಹಸಗೂಲಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಚಾಮುಲ್ ಗುಣಮಟ್ಟದ ಹಾಲು ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಿದ್ದು ಸಂಘ ಹಾಗೂ ಸದಸ್ಯರಿಗೆ ಹಲವಾರು ಸವಲತ್ತುಗಳನ್ನು ನೀಡುತ್ತಿದೆ. ಈಗಾಗಲೇ ಬೆಲೆಬಾಳುವ ಜಾನುವಾರುಗಳಿಗೆ ವಿಮೆ ಸೌಲಭ್ಯ ನೀಡಿರುವುದು ರೈತರಿಗೆ ಹೆಚ್ಚಿನ ಅನುಕೂಲವಾಗಿದೆ. ಸಂಜೀವಿನಿ ಯೋಜನೆಯಲ್ಲಿ 59 ವರ್ಷದೊಳಗಿನ ಹಾಲು ಉತ್ಪಾದಕರಿಗೆ 1 ಲಕ್ಷ ರೂಪಾಯಿ ವಿಮೆ ಸೌಲಭ್ಯ ನೀಡಲಾಗುತ್ತಿದ್ದು, ಆರ್ಹರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಅತಿ ಹೆಚ್ಚಿನ ಲಾಭಗಳಿಸುತ್ತಿರುವ ಇತರ ಒಕ್ಕೂಟಗಳಿಗಿಂತ ಚಾಮುಲ್ ತನ್ನ ಲಾಭದಲ್ಲಿ ಹೆಚ್ಚಿನ ಪಾಲನ್ನು ಸಂಘಗಳು ಹಾಗೂ ದಶಕಗಳ ಕಾಲ ಸೇವೆ ಸಲ್ಲಿಸಿದ ನೌಕರರ ಹಿತಾಸಕ್ತಿಗೆ ಬಳಸುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿರ್ದೇಶಕ ಎಂ.ಪಿ.ಸುನೀಲ್, ಮಾರ್ಗ ವಿಸ್ತರಣಾಧಿಕಾರಿ ಪ್ರಕಾಶ್, ಸಂಘದ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷ ನಿಂಗಪ್ಪ, ನಿರ್ದೇಶಕರಾದ ಉಮೇಶ್, ಮಹದೇವಪ್ಪ, ಬಸವರಾಜು, ಮಹೇಶ್ ಸೇರಿದಂತೆ ಹಲವರು ಇದ್ದರು.