

ಮದ್ದೂರು: ಜಲ ಮೂಲಗಳಾದ ಕೆರೆಗಳು ಮತ್ತು ಕಲ್ಯಾಣಿಗಳ ಪುನರ್ಜೀವನಕ್ಕಾಗಿ ಸಂಘ, ಸಂಸ್ಥೆಗಳು ಹಾಗೂ ಪ್ರತಿಯೊಬ್ಬರು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕೆಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಬಿಂದಾಸ್ ಪಾರ್ಟಿ ಹಾಲ್‌ನಲ್ಲಿ ಬುಧವಾರ ನಡೆದ ರೋಟರಿ ಮದ್ದೂರು2025ನೇ ಸಾಲಿನ ಅಧ್ಯಕ್ಷರು ಮತ್ತು ತಂಡದ ಅನುಷ್ಟಾಪನಾ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು.
ರೋಟರಿಯವರು ನಿಸ್ವಾರ್ಥ ಸೇವೆಮಾರ್ಗದಲ್ಲಿ ಯಾವುದೇ ಕಾರ್ಯ ಕೈಗೊಂಡರೆ ಅದು ನಿಶ್ಚಿತವಾಗಿ ಯಶಸ್ವಿಯಾಗುತ್ತದೆ. ಹಾಗಾಗಿ ಇಂತಹ ಸಾಮಾಜಿಕ ಸಮಸ್ಯೆಗಳ ಬಗ್ಗೆ ವಿಶೇಷ ಒತ್ತು ನೀಡಿ ಜಲ ಮೂಲಗಳನ್ನು ಉಳಿಸಬೇಕೆಂದರು.
ಹಲವಾರು ವರ್ಷಗಳಿಂದ ರೋಟರಿ ಸಂಸ್ಥೆಯೂ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನೊಂದವರ ಬಾಳಿಗೆ ಬೆಳಕಾಗುವ ಜತೆಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿರುವುದು ಮೆಚ್ಚುಗೆಯ ವಿಷಯ ಎಂದರು.
ಮಕ್ಕಳು ಮೊಬೈಲ್‌ಗಳಿಗೆ ಹೆಚ್ಚಾಗಿ ಆಸಕ್ತರಾಗುತ್ತಿದ್ದಾರೆ. ಇದೊಂದು ಗಂಭೀರ ಸಮಸ್ಯೆಯಾಗಿದ್ದು, ಮಕ್ಕಳನ್ನು ಮೊಬೈಲ್‌ನ ಅತಿಯಾದ ಬಳಕೆಯಿಂದ ದೂರವಿಟ್ಟು, ಅವರಿಗೆ ಸದ್ಗುಣ, ಸಂಸ್ಕಾರ ಹಾಗೂ ಜವಾಬ್ದಾರಿಯುತ ಬದುಕಿನ ದಾರಿಗೆ ಕರೆದೊಯ್ಯಬೇಕಿದೆ ಎಂದು ಸಲಹೆ ನೀಡಿದರು.
ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಎಸ್.ಪಿ.ಶ್ರೀನಿವಾಸ್ ಮಾತನಾಡಿ, ರೋಟರಿಯಲ್ಲಿ ಜವಾಬ್ದಾರಿಯುತ ಸ್ಥಾನವಾದ ಅಧ್ಯಕ್ಷ ಪದವಿಯನ್ನು ಸ್ವೀಕರಿಸಿದ್ದೇನೆ. ಸಮಾಜದ ಹಿತಕ್ಕಾಗಿ ಶಿಕ್ಷಣ, ಆರೋಗ್ಯ, ಯುವಕರ ಸಬಲೀಕರಣ, ಜಾನುವಾರುಗಳ ತಪಾಸಣಾ ಶಿಬಿರ, ಆರ್‌ವೈಎಲ್‌ಎ ಕಾರ್ಯಕ್ರಮಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತೇನೆ ಎಂದು ಭರವಸೆ ನೀಡಿದರು.
ಡಿಜಿ ಎಲಿಜಬೆತ್ ಚೆರಿಯನ್ ಮಾತನಾಡಿ, ಮುಂಬರುವ ರೋಟರಿ ಒಂದು ಐತಿಹಾಸಿಕ ಮತ್ತು ಶ್ರೇಷ್ಠ ಸಂಸ್ಥೆಯಾಗಲಿ ಎಂಬುದು ಎಲ್ಲರ ಆಶಯವಾಗಬೇಕು. ಭೂಮಿಯ ಮೇಲೆ ಇರುವ ಎಲ್ಲಾ ಪ್ರಾಣಿಗಳಿಗೆ ಜೀವಿಸುವ ಹಕ್ಕಿದೆ. ನಾವು ‘ಕಾರುಣ್ಯ’ ಎಂಬ ಪ್ರೊಜೆಕ್ಟ್ ಮೂಲಕ ಅವುಗಳ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು.
ನೂತನ ಅಧ್ಯಕ್ಷ ಹಾಗೂ ತಂಡದ ಪದವಿ ಸ್ವೀಕಾರವನ್ನು ಅಂತಾರಾಷ್ಟ್ರೀಯ ರೋಟರಿ ಜಿಲ್ಲಾ ಪಾಲಕರು ಡಾ.ಎಲಿಜಬೆತ್ ಚೆರಿಯನ್ ನಡೆಸಿಕೊಟ್ಟರು.
2025-26ನೇ ಸಾಲಿನ ಅಧ್ಯಕ್ಷರಾಗಿ ಎಸ್.ಪಿ.ಶ್ರೀನಿವಾಸ್ ಮತ್ತು ಕಾರ್ಯದರ್ಶಿಯಾಗಿ ಮಂಜುನಾಥ ನಾಯ್ಡು ಅವರು ಪದವಿ ಸ್ವೀಕರಿಸಿದರು.
ಸಾರ್ವಜನಿಕ ಸೇವಾ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸಿರುವ ಡಾ.ಆರ್.ಮನೋಹರ್ ಹಾಗೂ ಡಾ. ಎಂ.ವಿ.ಶೀಲಾ ಅವರಿಗೆ ಪಬ್ಲಿಕ್ ಸರ್ವಿಸ್ ಅವಾರ್ಡ್ ನೀಡಿ ಗೌರವಿಸಲಾಯಿತು.
ರೋಟರಿ ಜಿಲ್ಲಾ ಕಾರ್ಯದರ್ಶಿ ಬಿ.ಡಿ. ಹೊನ್ನೇಗೌಡ, ವಲಯ ಅಂಬಾಸಿಡರ್ ಟಿ.ಎಸ್.ರಾಜೇಶ್, ವಲಯ ಕಾರ್ಯದರ್ಶಿ ಐ.ಬರ್ನಾಡಪ್ಪ, ಸಹ ಪಾಲಕರು ಅನುಪಮಾ, ನಿಕಟಪೂರ್ವ ಅಧ್ಯಕ್ಷ ಚನ್ನಾಂಕೇಗೌಡ, ಕಾರ್ಯದರ್ಶಿ ಎ.ಲೋಕೇಶ್ ಇತರರು ಇದ್ದರು.