

ಹನೂರು: ಮಕ್ಕಳ ಭವಿಷ್ಯದ ಹಿತದೃಷ್ಠಿಯಿಂದ ಸಮಾಜ ಅಭಿವೃದ್ಧಿ ಹೊಂದಬೇಕಿದೆ. ಆದ್ದರಿಂದ ಪ್ರತಿಯೊಬ್ಬರೂ ಸಂಘಟಿತರಾಗಿ ಒಂದು ದೊಡ್ಡ ಶಕ್ತಿಯಾಗಿ ರೂಪುಗೊಳ್ಳಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಹಾಗೂ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಡಾ. ಶಂಕರ ಬಿದರಿ ಹೇಳಿದರು.
ಪಟ್ಟಣದ ಶ್ರೀ ಜಗದ್ಗುರು ರೇಣುಕಾಚಾರ್ಯ ಸಭಾ ಭವನದ ಚಿಕ್ಕಮಠದಲ್ಲಿ ಭಾನುವಾರ ಆಯೋಜಿಸಿದ್ದ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಪದಾಧಿಕಾರಿಗಳು ಹಾಗೂ ಸಮುದಾಯದ ಮುಖಂಡರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಸಮಾಜವು ತನ್ನದೆಯಾದ ಇತಿಹಾಸವನ್ನು ಹೊಂದಿದೆ. ದ್ವೇಷ, ಅಸೂಯೆಯನ್ನು ಹುಟ್ಟು ಹಾಕದೆ ಇತರರಲ್ಲೂ ಪ್ರೀತಿ, ವಿಶ್ವಾಸ ಹಾಗೂ ಗೌರವವನ್ನು ಹೊಂದುವುದರ ಮೂಲಕ ಹಿರಿಯರು ಬಾಳಿ ಬದುಕಿ ತೋರಿಸಿ ಕೊಟ್ಟಿದ್ದಾರೆ. ಆದ್ದರಿಂದ ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಹಾಗೆಯೇ ಸಂಘಟನೆ, ಸಂಪನ್ಮೂಲ ಕ್ರೋಢಿಕರಣದಿಂದ ಶಕ್ತಿವಂತರಾಗುವುದರ ಮೂಲಕ ಸಮಾಜದಲ್ಲಿ ಗೌರವ ಸಿಗಬೇಕಾದರೆ ಪ್ರತಿಯೊಬ್ಬರೂ ಪರಿಶ್ರಮ ಹಾಗೂ ಪ್ರಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕಿದೆ. ಆದರೆ, ಈ ಕೆಲಸವಾಗುತ್ತಿಲ್ಲ. ಉನ್ನತ ಸ್ಥಾನದಲ್ಲಿರಬೇಕಾದ ಸಮಾಜದಲ್ಲಿ ಒಡಕನ್ನುಂಟು ಮಾಡಿಕೊಂಡಿದ್ದು, ಹಿಂದುಳಿದಿದ್ದೇವೆ. ಗುರುತಿಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಳ್ಳುವುದರ ಮೂಲಕ ಪರಸ್ಪರ ಒಗ್ಗಟ್ಟಿನಿಂದ ಸಂಘಟಿತರಾಗಬೇಕಾದುದು ಅಗತ್ಯವೂ, ಅನಿವಾರ್ಯವೂ ಆಗಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ತಿಳಿಸಿದರು.
10 ಸಾವಿರ ಸದಸ್ಯತ್ವ ಪಡೆಯಬೇಕು: ರಾಜ್ಯದಲ್ಲಿ ಸಮುದಾಯವನ್ನು ಸಂಘಟನೆಯ ಮೂಲಕ ದೊಡ್ಡ ಶಕ್ತಿಯಾಗಿ ರೂಪಿಸುವ ಉದ್ದೇಶದಿಂದ ರಾಜ್ಯದ್ಯಂತ ಪ್ರವಾಸ ಕೈಗೊಳ್ಳಲಾಗಿದೆ. ಆದ್ದರಿಂದ ತಾಲೂಕಿನಲ್ಲಿ ಮನೆಗೆ ಒಬ್ಬರಂತೆ 250 ರೂ ನೀಡಿ 10 ಸಾವಿರ ಸದಸ್ಯತ್ವವನ್ನು ಹೊಂದಬೇಕು. ಮುಂಬರುವ ಬಸವ ಜಯಂತಿ ಮೆರವಣಿಗೆಯಲ್ಲಿ ತಾಲೂಕು ಕೇಂದ್ರದಲ್ಲಿ ಸಮುದಾಯದ ಶಕ್ತಿಯನ್ನು ಪ್ರದರ್ಶಿಸಬೇಕು. ತಾಲೂಕು ಘಟಕಗಳಲ್ಲಿ ಆರ್ಥಿಕ, ಸಾಮಾಜಿಕ, ಮೂಲ ಸೌಕರ್ಯ ಹಾಗೂ ಸಮಾಜದ ಅಭ್ಯುದಯಕ್ಕೆ ಪೂರಕವಾಗಿ ಸಮಿತಿಗಳನ್ನು ರಚಿಸಿಕೊಳ್ಳಬೇಕು. ಠೇವಣಿ ಕ್ರೂಢೀಕರಣವಾಗಬೇಕು. ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಇದರಿಂದ ಸಮಾಜದ ಅಭಿವೃದ್ಧಿ ಸಾಧ್ಯ. ಮುಂದಿನ ದಿನಗಳಲ್ಲಿ ಜಿಲ್ಲಾ ಘಟಕಕ್ಕೆ ಸುಸಜ್ಜಿತ ಕಟ್ಟಡ ಒದಗಿಸಿ ಕೊಡಲಾಗುವುದು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉದ್ಯೋಗ ಮಾರ್ಗದರ್ಶನ ಕೇಂದ್ರವನ್ನು ತೆರೆಯಲಾಗುವುದು ಎಂದು ತಿಳಿಸಿದರು.
ಒಗ್ಗಟ್ಟಾಗಬೇಕು: ಮಾಜಿ ಶಾಸಕಿ ಪರಿಮಳ ನಾಗಪ್ಪ ಮಾತನಾಡಿ, ನಮ್ಮ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಇದೆ. ಇದರಿಂದ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಒಗ್ಗೂಡಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದೆ. ಆದ್ದರಿಂದ ಏನೇ ಮನಸ್ತಾಪಗಳಿದ್ದರೂ ಅದನ್ನು ತ್ಯಜಿಸಿ ಒಗ್ಗಟ್ಟಿನಿಂದ ಸಂಘಟಿತರಾಗಬೇಕಿದೆ. ಇದರಿಂದ ಸಮುದಾಯವು ಅಭಿವೃದ್ಧಿ ಹೊಂದುವುದರಲ್ಲಿ ಎರಡು ಮಾತಿಲ್ಲ ಎಂದರು.
ಸಭೆಯಲ್ಲಿ ರಾಷ್ಟ್ರೀಯ ವೀರಶೈವ ಲಿಂಗಾಯತ ಮಹಾಸಭಾದ ಮಹಿಳಾ ಘಟಕದ ಸದಸ್ಯೆ ರೂಪದೇವಿ, ಮಹದೇವಸ್ವಾಮಿ, ಜಿಲ್ಲಾಧ್ಯಕ್ಷ ಮೂಡ್ನಾಪುರ ನಂದೀಶ್, ತಾಲೂಕು ಅಧ್ಯಕ್ಷ ಒಡೆಯರಪಾಳ್ಯ ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಕುಮಾರ್, ಹಿರಿಯ ಮುಖಂಡ ಡಾ.ಪ್ರೀತನ್ ನಾಗಪ್ಪ, ಉದ್ದನೂರು ಪ್ರಸಾದ್, ಪೊನ್ನಾಚಿ ಮಹದೇವಸ್ವಾಮಿ, ರಾಜಶೇಖರಮೂರ್ತಿ, ಮಹದೇವ, ಗುರುಮಲ್ಲಪ್ಪ, ಮುರುಡೇಶ್ವರ ಸ್ವಾಮಿ, ಘಟಕದ ಪದಾಧಿಕಾರಿಗಳು ಹಾಗೂ ಇತರರು ಇದ್ದರು.