

ಸಿದ್ದಾಪುರ: ಸೇವಾ ಮನೋಭಾವದ ಮೂಲಕ ಸಂಕಷ್ಟದಲ್ಲಿರುವವರಿಗೆ ನೆರವಾಗುವುದರೊಂದಿಗೆ ಸಮಾಜ ಸೇವೆಯಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಳ್ಳಬೇಕೆಂದು ಧಾರ್ಮಿಕ ಪಂಡಿತ ಪತ್ತನಪುರಂ ಸಿರಾಜುದ್ದೀನ್ ಖಾಸಿಮಿ ಕರೆ ನೀಡಿದರು.
ಗುಹ್ಯ ಗ್ರಾಮದ ಮಸೀದಿ ಸಮೀಪ ಇತ್ತೀಚೆಗೆ ನಡೆದ ಯೂತ್ ಹೆಲ್ತ್ ಕೇರ್ ಚಾರಿಟಬಲ್ ಟ್ರಸ್ಟ್‌ನ 7ನೇ ಹಾಗೂ ಆಂಬುಲೆನ್ಸ್ ಸೇವೆಯ 2ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಗ್ರಾಮ ವ್ಯಾಪ್ತಿಗಳಲ್ಲಿ ಜಾತಿ, ಮತ, ಭೇದವಿಲ್ಲದೆ ನಿರ್ಗತಿಕ ಬಡ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಯೂತ್ ಹೆಲ್ತ್ ಕೇರ್ ಟ್ರಸ್ಟ್ ಪದಾಧಿಕಾರಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಧಾರ್ಮಿಕ ಪಂಡಿತ ಸೈಯ್ಯದ್ ಹೈದ್ರೊಸಿ ತಂಗಳ್, ಗುಯ್ಯ ಮಹಲ್ ಕಮಿಟಿ ಅಧ್ಯಕ್ಷ ಸಿ.ಯು ಮುಸ್ತಫ, ಪ್ರಮುಖರಾದ ಸಿರಾಜುದ್ದೀನ್, ಸಯ್ಯದ್ ಅಬ್ಬಾಸ್ ತಂಙಳ್, ಯೂತ್ ಹೆಲ್ತ್ ಕೇರ್ ಅಧ್ಯಕ್ಷ ಅಬ್ದುಲ್ ರಶೀದ್, ಕಾರ್ಯದರ್ಶಿ ಕೆ.ಪಿ.ಹಂಸ ಮೌಲವಿ, ಖತಿಬ್ ಹನೀಫ್ ರಹಮಾನಿ ಇತರರು ಇದ್ದರು.