ಪ್ರತಿಯೊಬ್ಬರೂ ಸೇವಾ ಮನೋಭಾವ ಬೆಳೆಸಿಕೊಳ್ಳಿ

2KMD-1
Published on

ಕೆ.ಎಂ. ದೊಡ್ಡಿ : ದೇವಸ್ಥಾನದ ಜೀರ್ಣೋದ್ಧಾರಕ್ಕೆ ಆರ್ಥಿಕ ನೆರವು ನೀಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಅಜ್ಜಹಳ್ಳಿ ಬಸವರಾಜು ಅವರನ್ನು ಸೋಮವಾರ ತೊರೆಚಾಕನಹಳ್ಳಿ ಗ್ರಾಮದ ಶ್ರೀ ಹನುಮಂತರಾಯ ಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಅಭಿನಂದಿಸಲಾಯಿತು.

ತೊರೆಚಾಕನಹಳ್ಳಿ ಗ್ರಾಮದಲ್ಲಿ ಶ್ರೀ ಹನುಮಂತರಾಯಸ್ವಾಮಿ ದೇವಾಲಯ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಟ್ರಸ್ಟ್ ಅಧ್ಯಕ್ಷ ತೊರೆಚಾಕನಹಳ್ಳಿ ಎಂ. ಸಂಪ್ರೀತ್‌ಕುಮಾರ್ ಅವರ ಮೂಲಕ ದೇವಾಲಯ ಅಭಿವೃದ್ಧಿಗೆ ಗ್ರಾಮದವರೇ ಆದ ಜಿಲ್ಲಾಧಿಕಾರಿ ಅಜ್ಜಹಳ್ಳಿ ಬಸವರಾಜು ಆರ್ಥಿಕ ಸಹಾಯ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅಜ್ಜಹಳ್ಳಿ ಬಸವರಾಜು ಮಾತನಾಡಿ, ಅಭಿವೃದ್ಧಿಗೆ ಗ್ರಾಮಸ್ಥರು ಒಗ್ಗಟಾಗಿ ಶ್ರಮಿಸಬೇಕು. ಗ್ರಾಮಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುತ್ತದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ತಿಳಿಸಿದರು.

ಪ್ರತಿಯೊಬ್ಬರು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ತಾವು ದುಡಿದ ಹಣದಲ್ಲಿ ಕೈಲಾದಷ್ಟು ನೆರವು ನೀಡುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಕೈ ಜೋಡಿಸಬೇಕು. ಪ್ರಸ್ತುತ ಸಮಾಜದಲ್ಲಿ ಯುವಜನತೆ ದಾರಿ ತಪ್ಪುತ್ತಿದ್ದು ಅವರನ್ನು ಸರಿಯಾದ ಮಾರ್ಗದಲ್ಲಿ ನಡೆಸಲು ಶ್ರಮಿಸಬೇಕು ಎಂದರು.

ಶ್ರೀ ಹನುಮಂತರಾಯ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ತೊರೆಚಾಕನಹಳ್ಳಿ ಎಂ. ಸಂಪ್ರೀತ್‌ಕುಮಾರ್, ಕ್ಯಾತಘಟ್ಟ ಗ್ರಾಪಂ ಅಧ್ಯಕ್ಷ ಪ್ರಕಾಶ್, ಮುಖಂಡರಾದ ಚನ್ನೇಗೌಡ, ಬೋರೇಗೌಡ, ಪುಟ್ಟಸ್ವಾಮಿ, ಟಿ.ಮಲ್ಲಯ್ಯ, ಜವರಾಯಿ, ನಾಗೇಶ್, ಯುವ ಮುಖಂಡ ಶಂಕರೇಗೌಡ ಸೇರಿದಂತೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net