

ಕೊಳ್ಳೇಗಾಲ: ತಾಲೂಕಿನ ಶ್ರೀ ಸುಕ್ಷೇತ್ರ ಕುಂತೂರು ವೀರ ಸಿಂಹಾಸನ ಮಠದಲ್ಲಿ ಇತ್ತೀಚೆಗೆ ಎರಡು ದಿನಗಳ ಕಾಲ ಆಯೋಜಿಸಿದ್ದ ಶ್ರೀ ಮಲೆ ಮಹದೇಶ್ವರ ಜಯಂತಿ, ಶ್ರೀಗುರುಗಳ ಸ್ಮರಣೆ, ಶ್ರಾವಣ ಮಾಸದ ಪೂಜಾನುಷ್ಟಾನ, ಸಾಹಿತ್ಯ, ಕಲೆ, ಸಾಂಸ್ಕೃತಿಕ ಕಲಾವಿದರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ದೇಶಿಸಿ ಕುಂತೂರು ವೀರ ಸಿಂಹಾಸನ ಮಠದ ಪೀಠಾಧಿಪತಿ ಶ್ರೀ ಶಿವ ಪ್ರಭುಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರು ಧರ್ಮದ ಅರಿವು ಪಡೆದುಕೊಂಡು ಅದರ ರಕ್ಷಣೆಗೆ ಮುಂದಾಗಬೇಕು. ಧರ್ಮವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಇಂತಹ ಕಾರ್ಯಕ್ರಮಗಳು ಹೆಚ್ಚಿನ ರೀತಿಯಲ್ಲಿ ನಡೆಯಬೇಕು. ಎಲ್ಲರನ್ನು ಜ್ಞಾನದ ಕಡೆಗೆ ಕರೆದೊಯ್ಯಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದರು.
ಹಿರಿಯ ಗುರುಗಳಾದ ಸಂಸ್ಮರಣ ಮಹೋತ್ಸವ ಶ್ರೀ ಗುರುಗಳ ಗದ್ದಿಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾ ಮಂಗಳಾರತಿ ನೆರವೇರಿಸಲಾಯಿತು. ಶ್ರೀಗಳ ಲಿಂಗಾನುಷ್ಠಾನ ಪೂಜೆ, ಶಿವಾನುಭವ ಗೋಷ್ಟಿ, ಪ್ರವಚನ ಕಾರ್ಯಕ್ರಮ ನಡೆಯಿತು. ಭಕ್ತರಿಗೆ ಪ್ರಸಾದ ವಿತರಣೆ ನೆರವೇರಿಸಲಾಯಿತು.
ಚಾಮರಾಜನಗರ ವಿರಕ್ತ ಮಠದ ಶ್ರೀ ಚೆನ್ನಬಸವಸ್ವಾಮೀಜಿ, ನೀಲಕಂಠಸ್ವಾಮಿ ಮಠದ ಶ್ರೀ ಸಿದ್ದಮಲ್ಲ ಸ್ವಾಮೀಜಿ, ಮರಿಯಾಲಮಠದ ಮರುಗ ರಾಜೇಂದ್ರ ಸ್ವಾಮೀಜಿ, ದಂಡಿಕೆರೆ ಮಠದ ಶ್ರೀ ಬಸವ ಲಿಂಗಸ್ವಾಮೀಜಿ, ಕಾಮಗೆರೆ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಹೊಂಡರಬಾಳು ಮಠದ ಶ್ರೀ ಪ್ರಸನ್ನ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ನೀಲಕಂಠ ಸ್ವಾಮೀಜಿ, ಗೌಡಳ್ಳಿ ಮಠದ ಮರಿ ತೋಂಟದಾರ್ಯ ಸ್ವಾಮೀಜಿ, ಚಿಲಕವಾಡಿ ಮಠದ ಶ್ರೀ ಇಮ್ಮಡಿ ಗುರುಲಿಂಗ ಸ್ವಾಮೀಜಿ, ರೇಚಂಬಳ್ಳಿ ಮಠದ ಮಹದೇವ ಸ್ವಾಮೀಜಿ, ದೇವಲಪುರ ಮಠದ ಶ್ರೀಜಡೇ ಸ್ವಾಮೀಜಿ, ಸಿಂಧೂವಳ್ಳಿ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಸೇರಿದಂತೆ ಹರಗುರು ಚರಮೂರ್ತಿಗಳು ಪಾಲ್ಗೊಂಡಿದ್ದರು.
ಎರಡನೇ ದಿನದ ಭಾನುವಾರದ ಕಾರ್ಯಕ್ರಮದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಗಂಗಾಮಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಭುಸ್ವಾಮಿ, ಮುಖಂಡ ಕುಂತೂರು ಮೋಳೆ ರಾಜೇಂದ್ರ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಲೋಕೇಶ್ ಇದ್ದರು.