ಪ್ರತಿ ಪ್ರಜೆಗೂ ಸ್ವಾತಂತ್ರೃ, ಸಮಾನತೆ ದೊರಕಲಿ

02Kush01
Published on

ಕುಶಾಲನಗರ: ಭಾರತಕ್ಕೆ ಸ್ವಾತಂತ್ರೃ ಬಂದ ನಂತರ ವರ್ಣರಹಿತ, ವರ್ಗರಹಿತ ಹಾಗೂ ಜಾತಿರಹಿತ ನಾಡಾಗಬೇಕು, ಆ ಮೂಲಕ ದೇಶದ ಪ್ರತಿಯೊಬ್ಬ ಪ್ರಜೆಗೂ ಸ್ವಾತಂತ್ರೃ ಮತ್ತು ಸಮಾನತೆ ದೊರಕಬೇಕು ಎಂಬುದು ಸಂವಿಧಾನದ ಆಶಯವಾಗಿದೆ ಎಂದು ಕೊಡಗು ವಿವಿ ಕುಲಪತಿ ಪ್ರೊ.ಅಶೋಕ ಸಂ.ಆಲೂರ ಅಭಿಪ್ರಾಯಪಟ್ಟರು.


ಕುಶಾಲನಗರ ತಾಲೂಕಿನ ಚಿಕ್ಕಅಳುವಾರದ ಜ್ಞಾನ ಕಾವೇರಿ ಆವರಣದಲ್ಲಿ ಕೊಡಗು ಜಿಲ್ಲಾಡಳಿತ, ಸಮಾಜಕಲ್ಯಾಣ ಇಲಾಖೆ ಹಾಗೂ ಕೊಡಗು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಶನಿವಾರ ಆಯೋಜಿಸಿದ್ದ ಸಂವಿಧಾನ ಜಾಗೃತಿ ಜಾಥಾದ ಸಭಾ ಕಾರ್ಯಕ್ರಮವನ್ನು ಡಾ ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.


ಸಮಾನತೆ ಎಂಬುದು ಭಾರತೀಯರ ಹಲವಾರು ಶತಮಾನಗಳ ಕನಸಾಗಿತ್ತು. ಕ್ರಿ.ಶ. ಹನ್ನೆರಡನೇ ಶತಮಾನದ ಬಸವಾದಿ ಶರಣರ ಸಾಮಾಜಿಕ ಆಂದೋಲನಗಳು ಮತ್ತು ಚಿಂತನೆಗಳು ದೇಶದ ಸಂವಿಧಾನದ ಪ್ರಸ್ತಾವನೆಯ ಆಶಯಗಳನ್ನು ಹೊಂದಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿವೆ. ಬಾಬಾ ಸಾಹೇಬ್ ಅಂಬೇಡ್ಕರ್ ಆವರು ವಿಶ್ವದ ಎಲ್ಲ ಸಂವಿಧಾನಗಳನ್ನು ಓದಿ ಅರ್ಥೈಸಿಕೊಂಡು ಅದರಲ್ಲಿನ ಮಾನವೀಯ ಮೌಲ್ಯದ ವಿಚಾರಗಳನ್ನು ದೇಶದ ಸಂವಿಧಾನದಲ್ಲಿ ಅಳವಡಿಸಿ ಜಾರಿಗೆ ತಂದರು. ಭಾರತೀಯ ಸಂವಿಧಾನದ ಮೂಲಾಧಾರವಾಗಿರುವ ಮೂಲ ಹಕ್ಕುಗಳು ಮತ್ತು ಕರ್ತವ್ಯಗಳ ಬಗೆಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದರು.


ಕೊಡಗು ವಿಶ್ವವಿದ್ಯಾಲಯದ ಕುಲಸಚಿವ ಡಾ.ಸೀನಪ್ಪ ಮಾತನಾಡಿ, ವಿಶ್ವದ ಶ್ರೇಷ್ಠ ಸಂವಿಧಾನಗಳಲ್ಲೊಂದಾಗಿರುವ ಭಾರತೀಯ ಸಂವಿಧಾನವು ವಿಚಾರಪರವಾದ ವಿಶ್ವಶಾಂತಿ ಮತ್ತು ಸಮ ಸಮಾಜದ ಪರಿಕಲ್ಪನೆಯನ್ನು ಹೊಂದಿದೆ. ಭಾರತವನ್ನು ಕಲ್ಯಾಣ ರಾಷ್ಟ್ರವನ್ನಾಗಿ ನಿರ್ಮಾಣ ಮಾಡುವಲ್ಲಿ, ದೇಶದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯುವಲ್ಲಿ ಮತ್ತು ರಕ್ಷಿಸುವಲ್ಲಿ ಭಾರತದ ಸಂವಿಧಾನದ ಪಾತ್ರವು ಮಹತ್ವದ್ದಾಗಿದೆ. ಭಾರತವನ್ನು ಸಾರ್ವಭೌಮ, ಜಾತ್ಯತೀತ, ಸಮಾಜವಾದಿ, ಮತಧರ್ಮ ನಿರಪೇಕ್ಷಿತ ಮತ್ತು ಪ್ರಜಾಸತ್ತಾತ್ಮಕ ಗಣತಂತ್ರ ದೇಶವನ್ನಾಗಿ ಘೋಷಿಸಲಾಗಿದೆ. ವ್ಯಕ್ತಿಯ ಗೌರವ ಮತ್ತು ಘನತೆಯನ್ನು ಮೂಲ ಹಕ್ಕುಗಳು ಕಾಪಾಡಿದರೆ, ಸಾಮಾಜಿಕ ಒಗ್ಗಟ್ಟು, ದೇಶಭಕ್ತಿ, ರಾಷ್ಟ್ರೀಯ ಏಕೀಕರಣವನ್ನು ಪ್ರೇರೇಪಿಸುವ ಕೆಲಸವನ್ನು ಮೂಲ ಕರ್ತವ್ಯಗಳು ಮಾಡುತ್ತವೆ. ಅನುಭವಗಳ ಆಧಾರದ ಮೇಲೆ ರೂಪುಗೊಂಡ ಸಾರ್ವಕಾಲಿಕ ಲಿಖಿತ ಸಂವಿಧಾನ ನಮ್ಮದಾಗಿದೆ ಎಂದು ತಿಳಿಸಿದರು.


ಸಮಾಜಕಲ್ಯಾಣ ಇಲಾಖೆಯ ಸಿಬ್ಬಂದಿ ಮಧು, ಎಚ್.ಎಸ್.ಪ್ರಕಾಶ್, ವಿವಿಧ ವಿಭಾಗಗಳ ಉಪನ್ಯಾಸಕರು, ಆಡಳಿತ ವೃಂದ, ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net