ಬ್ಯಾಂಕ್‌ಗಳಂತೆ ಶಿಕ್ಷಣವು ರಾಷ್ಟ್ರೀಕರಣವಾಗಲಿ

ಬ್ಯಾಂಕ್‌ಗಳಂತೆ ಶಿಕ್ಷಣವು ರಾಷ್ಟ್ರೀಕರಣವಾಗಲಿ
Published on

ಹಾಸನ: ದೇಶದ ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕೆಂದರೆ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿದ ರೀತಿಯಲ್ಲಿ ಶಿಕ್ಷಣವನ್ನು ಮಾಡಬೇಕು ಎಂದು ಸಾಹಿತಿ ಕೆ.ಎಸ್.ಭಗವಾನ್ ಪ್ರತಿಪಾದಿಸಿದರು.

ನಗರದ ಸಂಸ್ಕೃತ ಭವನದಲ್ಲಿ ಮಾಣಿಕ್ಯ ಪ್ರಕಾಶನದಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ 10ನೇ ಕವಿಕಾವ್ಯ ಸಂಭ್ರಮ, ಕನ್ನಡ ರಾಜ್ಯೋತ್ಸವ ಹಾಗೂ ದಶಮಾನೋತ್ಸವ ಉದ್ಘಾಟಿಸಿ ಮಾತನಾಡಿದರು.

ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ನೆರವಿನಿಂದ ಶೂದ್ರರು ಸಹ ಇಂದು ಅಕ್ಷರ ಕಲಿಯುವಂತಾಗಿದೆ. ಸಾವಿರಾರು ವರ್ಷಗಳಿಂದ ಶಿಕ್ಷಣವೆಂದರೆ ಕೇವಲ ಮೇಲ್ಜಾತಿಯವರಿಗೆ ಸೀಮಿತ ಎಂಬ ಪರಿಸ್ಥಿತಿ ಇತ್ತು. ಸಂವಿಧಾನ ಜಾರಿಯಾದ ಬಳಿಕ ಆ ಪರಿಸ್ಥಿತಿ ಸ್ವಲ್ಪ ಬದಲಾಗಿದೆ. ಎಲ್ಲರೂ ಸ್ವಾವಲಂಬಿ, ಘನತೆಯ ಬದುಕು ಕಟ್ಟಿಕೊಳ್ಳಬೇಕೆಂದರೆ ಶಿಕ್ಷಣ ಮುಖ್ಯ. ಆದ್ದರಿಂದ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿದ ರೀತಿಯಲ್ಲಿ ಶಿಕ್ಷಣವನ್ನು ಮಾಡಬೇಕು ಎಂದ ಅವರು, ಬ್ರಿಟಿಷರು ನಮ್ಮ ದೇಶಕ್ಕೆ ಬಾರದೆ ಇದ್ದಿದ್ದರೆ ಎಲ್ಲರಿಗೂ ಶಿಕ್ಷಣ ಪಡೆಯುವ ಅವಕಾಶ ಸಿಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.

ದ್ವಿಭಾಷಾ ಸೂತ್ರ ಜಾರಿಯಾಗಲಿ: ರಾಜ್ಯದಲ್ಲಿ ಮೊದಲ ಭಾಷೆಯಾಗಿ ಕನ್ನಡ ಹಾಗೂ ದ್ವಿತೀಯ ಭಾಷೆಯಾಗಿ ಇಂಗ್ಲಿಷ್ ಜಾರಿಯಾಗಬೇಕು. ತೃತೀಯ ಭಾಷಾ ಸೂತ್ರಕ್ಕೆ ಯಾವ ಕಾರಣಕ್ಕೂ ಒಪ್ಪಬಾರದರು. ಕನ್ನಡ ಇಲ್ಲಿನ ಮೂಲ ಭಾಷೆಯಾಗಿದ್ದು, ಇಂಗ್ಲಿಷ್ ವ್ಯಾವಹಾರಿಕವಾಗಿ ಅನಿವಾರ್ಯವಾಗಿದೆ. ಆದರೆ ಹಿಂದಿಯನ್ನು ಕಲಿಯಲೇಬೇಕೆಂಬ ಕಡ್ಡಾಯ ನಿಯಮವನ್ನು ಕನ್ನಡಿಗರು ಯಾವ ಕಾರಣಕ್ಕೂ ಒಪ್ಪಬಾರದು ಎಂದರು.

ದೇಶದ ಇತಿಹಾಸವನ್ನು ಎಲ್ಲರೂ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಇನ್ನೊಬ್ಬರನ್ನು ಮೆಚ್ಚಿಸಲು ಬರವಣಿಗೆಯಲ್ಲಿ ತೊಡಗಬಾರದು. ಹೃದಯ ಮತ್ತು ಮನಸ್ಸು ಏನು ಹೇಳುತ್ತದೆಯೋ ಅದನ್ನು ಮಾತ್ರ ಬರೆಯಬೇಕು. ನಮ್ಮ ಬರವಣಿಗೆ ಸತ್ಯ ನಿಷ್ಠವಾಗಿರಬೇಕು. ನಮ್ಮ ಆಲೋಚನೆಗಳನ್ನು ವಿರೋಧಿಸುವವರು ಇದ್ದೇ ಇರುತ್ತಾರೆ. ಸಮಾಜ ಎಂದ ಮೇಲೆ ನಮ್ಮನ್ನು ಪ್ರೀತಿಸುವ ಹಾಗೂ ದ್ವೇಷಿಸುವ ಜನರು ಇರುತ್ತಾರೆ. ಅದಕ್ಕೆ ತಲೆ ಕೆಡಿಸಿಕೊಳ್ಳದೆ ಸಮಾಜದ ಹಿತಕ್ಕಾಗಿ, ಸತ್ಯಕ್ಕಾಗಿ ನಮ್ಮ ಲೇಖನಿ ಬಳಕೆಯಾಗಬೇಕು ಎಂದು ಹೇಳಿದರು.

ಈ ದೇಶದಲ್ಲಿ ಶೇ.3 ರಷ್ಟು ಬ್ರಾಹ್ಮಣರಿದ್ದರೆ ಶೇ.97ರಷ್ಟು ಶೂದ್ರರಿದ್ದಾರೆ. ಆದರೂ ಬ್ರಾಹ್ಮಣರೇ ಎಲ್ಲದರಲ್ಲೂ ಶ್ರೇಷ್ಠ ಎಂಬ ಮನಸ್ಥಿತಿ ನಿರ್ಮಾಣವಾಗಿತ್ತು. ಡಾ.ಬಿ.ಆರ್. ಅಂಬೇಡ್ಕರ್ ಅವರು ಈ ಎಲ್ಲ ಶೋಷಣೆಗಳನ್ನು ಅನುಭವಿಸಿ ಕಣ್ಣೀರು ಹಾಕಿದರು. ಭವಿಷ್ಯದ ಪೀಳಿಗೆಗೆ ಅನುಕೂಲ ಮಾಡಿಕೊಡಬೇಕೆಂದು ಅವರು ಸಾಕಷ್ಟು ಹೋರಾಟ ನಡೆಸಿದರು. ಅದರ ಪ್ರತಿಫಲವೇ ನಾವು ಇಂದು ಅಕ್ಷರ ಕಲಿಯುವಂತಾಗಿದೆ ಎಂದರು.

ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಪರ ಕಾರ್ಯದರ್ಶಿ ಎಚ್.ಬಿ.ಮದನ್‌ಗೌಡ ಮಾತನಾಡಿ, ಶಿಕ್ಷಕ ಕೊಟ್ರೇಶ್ ಎಸ್.ಉಪ್ಪಾರ್ ಹಾಗೂ ದೀಪಾ ಉಪ್ಪಾರ್ ಅವರು ಹತ್ತು ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯವಾದುದು ಎಂದರು.

ಕನ್ನಡ ಸಾಹಿತ್ಯಕ್ಕೆ ಜಿಲ್ಲೆಯ ಕೊಡುಗೆ ಸಾಕಷ್ಟಿದೆ. ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಹಾಸನದವರು. ಅದೇ ರೀತಿ ವಿಶ್ವ ಮಟ್ಟದಲ್ಲಿ ಹೆಸರು ಮಾಡಿದ್ದ ಎಸ್.ಎಲ್.ಭೈರಪ್ಪ ಅವರು ನಮ್ಮ ಜಿಲ್ಲೆಯವೇ ಎನ್ನುವುದು ಖುಷಿಯ ವಿಚಾರ. ಎಲೆಮರೆ ಕಾಯಿಯಂತಿರುವ ಲೇಖಕರನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸುವ ಕೆಲಸವನ್ನು ಮಾಣಿಕ್ಯ ಪ್ರಕಾಶನ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕವಿಕಾವ್ಯ ಸಂಭ್ರಮದ ಸರ್ವಾಧ್ಯಕ್ಷೆ ವಾಣಿಶೆಟ್ಟಿ ಮಾತನಾಡಿ, ಸಾಮರಸ್ಯದ ಬದುಕಿಗೆ ಪುಸ್ತಕ ಓದಬೇಕು. ಸಾಮಾಜಿಕ ಸಾಮರಸ್ಯದಿಂದ ಮನುಷ್ಯ ಉನ್ನತ ಮಟ್ಟಕ್ಕೆ ಏರುತ್ತಾನೆ. ಶಾಲಾ ದಿನಗಳಿಂದಲೇ ಸಾಹಿತ್ಯದತ್ತ ಆಸಕ್ತಿ ಬೆಳೆಸಿಕೊಂಡರೆ ಅಂತವರು ನೆಮ್ಮದಿ ಬದುಕು ಕಟ್ಟಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾ ಗೌರವಾಧ್ಯಕ್ಷ ರವಿ ನಾಕಲಗೂಡು ಮಾತನಾಡಿ, ಮಾಣಿಕ್ಯ ಪ್ರಕಾಶನ ನಡೆಸುವ ಕಾರ್ಯಕ್ರಮಗಳು ಅಚ್ಚುಕಟ್ಟಾಗಿರುತ್ತವೆ. ಲೇಖಕರನ್ನು ಗುರುತಿಸಿ ಬೆಳೆಸುವ ಪರಿ ಮೆಚ್ಚುವಂತಹುದು. ಇಂತಹ ಕಾರ್ಯಕ್ರಮಗಳು ಹೆಚ್ಚಾಗಲಿ ಎಂದು ಆಶಿಸಿದರು.

ಲೇಖಕರಾದ ವಿಶ್ವೇಶ್ವರ್ ಮೇಟಿ, ಸತೀಶ್ ಜವರೇಗೌಡ, ನಾಗರಾಜ್ ಹೆತ್ತೂರು ಮಾತನಾಡಿದರು. ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಹೊಯ್ಸಳ ಸಾಂಸ್ಕೃತಿಕ ಪ್ರಶಸ್ತಿ ಪ್ರದಾನ: ಹಾಸನದ ಜಿ.ಪ್ರಕಾಶ್, ಕೊಡಗು ಜಿಲ್ಲೆಯ ಡಾ. ರಘು ಕೋಟಿ, ಮೈಸೂರಿನ ಡಾ. ಎಚ್.ಎಲ್.ಶಿವಬಸಪ್ಪ, ಅರಸೀಕೆರೆಯ ಕೆ.ಎಸ್.ಮಂಜುನಾಥ್ ಹಾಗೂ ವೈ.ಎಸ್.ರಮೇಶ್ ಅವರಿಗೆ ಹೊಯ್ಸಳ ಸಾಂಸ್ಕೃತಿಕ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net