

ಹಾಸನ: ನಾಡಹಬ್ಬ ದಸರಾ ಹಿಂದುಗಳ ಆರಾಧನೆ. ಹಿಂದುಗಳು ನಡೆಸಿಕೊಂಡು ಬಂದಿರುವ ಸಂಪ್ರದಾಯವಗಿರುವುದರಿಂದ ಅದರಂತೆ ಈ ಬಾರಿಯೂ ದಸರಾ ಉದ್ಘಾಟನೆಯಾಗಲಿ ಎಂದು ಕರ್ನಾಟ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಮಾಡಲು ನನ್ನ ಅಭ್ಯಂತರವೇನೂ ಇಲ್ಲ. ಆದರೆ ಈವರೆಗೆ ಏನು ಸಂಪ್ರದಾಯ ನಡೆದುಕೊಂಡು ಬಂದಿದೆಯೋ, ಆ ಪ್ರಕಾರವೇ ಚಾಲನೆ ಪಡೆಯಬೇಕು ಎಂದು ಹೇಳಿದರು.
ಯಾವುದೇ ಧರ್ಮದವರು ಮತ್ತೊಂದು ಧರ್ಮದವರನ್ನು ಗೌರವಿಸಿ, ಅರ್ಥ ಮಾಡಿಕೊಂಡಾಗ ಅವರಿಗೂ ಗೌರವ ಹೆಚ್ಚಲಿದೆ ಎಂಬುದು ನನ್ನ ಭಾವನೆ. ಹಾಗಾಗಿ ಯಾರೇ ಆಗಲಿ, ಸುಮ್ಮನೆ ಬಾಯಿಗೆ ಬಂದಂತೆ ಹೇಳಿಕೆ ಕೊಡುವುದನ್ನು ಬಿಡಬೇಕು ಎಂದರು.
ಯಾವುದೋ ಒಂದು ಧರ್ಮದ ಸಂಪ್ರದಾಯ ಈವರೆಗೂ ದಸರಾ ಮುನ್ನಡೆಸಿಕೊಂಡು ಬಂದಿದೆ. ಆ ಪ್ರಕಾರವೇ ದಸರಾ ಉದ್ಘಾಟನೆ ಆಗಬೇಕೇ ಹೊರತು,ನಿಮ್ಮ ರಾಜಕೀಯ ತೆವಲಿಗಾಗಿ, ಸ್ವಂತ ಆಲೋಚನೆಗಳಿಗಾಗಿ ನಾನು ಹೀಗೆಯೇ ದಸರಾ ಉದ್ಘಾಟನೆ ಮಾಡ್ತೀನಿ, ಹೀಗೆಯೇ ನಡೆದುಕೊಳ್ತೀನಿ ಅನ್ನೋದು ಸರಿ ಅಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಭುವನೇಶ್ವರಿ ಬಗ್ಗೆ ಹಿಂದೆ ಲಘುವಾಗಿ ಮಾತನಾಡಿದ್ದಾರೆ. ಭುವನೇಶ್ವರಿಗೆ ಅರಿಶಿಣ ಕುಂಕುಮ ಹಾಕಿ ದೇವರು ಮಾಡಿ ಕೂರಿಸಿ ಬಿಟ್ರೆ ನಾವೇನು ಮಾಡಬೇಕು ಅನ್ನೋ ಪ್ರಶ್ನೆ ಮುಂದಿಟ್ಟಿದ್ದಾರೆ. ಭುವನೇಶ್ವರಿಯನ್ನು ಎಲ್ಲಾ ಧರ್ಮೀಯರು ಆರಾಧಿಸುತ್ತಾರೆ ಅದು ಅವರಿಗೆ ಚೆನ್ನಾಗಿ ಗೊತ್ತಿರಬೇಕು. ಅವರು ಹುಟ್ಟುವುದಕ್ಕಿಂತ ಮುಂಚೆ ಭುವನೇಶ್ವರಿ ಹುಟ್ಟಿದ್ದಳು. ಬನವಾಸಿ ರಾಜ ಮನೆತನದವರು ಭುವನೇಶ್ವರಿಯನ್ನು ಆರಾಧಿಸಿಕೊಂಡು ಬಂದಿದ್ದರು. ಆ ಭುವನೇಶ್ವರಿ ಮೂಲಕ ಇಡೀ ಕರ್ನಾಟಕ, ಕನ್ನಡಿಗರಿಗೆ ಒಂದು ರೀತಿ ಭಕ್ತಿ ಭಾವ ಬೆಸೆದಿದೆ ಎನ್ನುವ ಮೂಲಕ ಭುವನೇಶ್ವರಿ ಕುರಿತಾದ ಹೇಳಿಕೆಯನ್ನು ಖಂಡಿಸಿದರು.
ನೀವು ದಸರಾ ಉದ್ಘಾಟನೆ ಮಾಡುವುದರಲ್ಲಿ ನಮ್ಮ ಭಿನ್ನಾಭಿಪ್ರಾಯ ಇಲ್ಲ. ನಿಮ್ಮ ಕೆಲವು ಹೇಳಿಕೆ ಇವೆಯಲ್ಲ, ಅವು ಕನ್ನಡಿಗರಿಗೆ ನೀವು ಮಾಡಿದ ಅಪಮಾನ ಎಂದು ನನಗೆ ಅನಿಸುತ್ತದೆ ಎಂದು ಹೆಸರು ಹೇಳದೆಯೇ ಕುಟುಕಿದರು.
ಇಂತಹ ಹೇಳಿಕೆಗಳಿಂದ ದೂರ ಉಳಿದು ದಸರಾ ಉದ್ಘಾಟನೆ ಮಾಡಿದರೆ ತಪ್ಪಿಲ್ಲ, ಏಳೂವರೆ ಕೋಟಿ ಕನ್ನಡಿಗರ ತೀರ್ಮಾನವವನ್ನು ಯಾರೋ ಒಬ್ಬರಿಗೆ ಹೋಲಿಕೆ ಮಾಡುವುದು ನನಗೆ ಇಷ್ಟ ಇಲ್ಲ. ಏಳೂವರೆ ಕೋಟಿ ಕನ್ನಡಿಗರು ಭುವನೇಶ್ವರಿಯನ್ನು ಒಪ್ಪಿ ಕೊಂಡಿರುವಾಗ, ಯಾರೋ ಒಬ್ಬರು ಒಪ್ಪಿಕೊಳ್ಳಲ್ಲ ಅಂದರೆ ನಾವೂ ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.
ಭುವನೇಶ್ವರಿ ಬಗ್ಗೆ ಮಾತನಾಡಿರುವವರು ನಾಳೆ ಚಾಮುಂಡೇಶ್ವರಿ ಬಗ್ಗೆ ಮಾತನಾಡಲ್ಲ ಅನ್ನೋದು ಏನು ಗ್ಯಾರಂಟಿ ಎಂದು ಪ್ರಶ್ನಿಸಿದ ನಾರಾಯಣಗೌಡ, ಭುವನೇಶ್ವರಿ ಬಗ್ಗೆ ಮಾತನಾಡುವವರಿಗೆ, ಭುವನೇಶ್ವರಿಯನ್ನು ಒಂದು ಧರ್ಮದ ಹಿನ್ನೆಲೆಯಲ್ಲಿ ನೋಡುವವರಿಗೆ ದಸರೆ ವಿಚಾರವೂ ಮುಖ್ಯ. ಚಾಮುಂಡೇಶ್ವರಿ, ಭುವನೇಶ್ವರಿ ಒಪ್ಪಿಕೊಳ್ಳಲ್ಲ ಎಂದರೆ ಮತ್ತೆ ದಸರಾ ಹೇಗೆ ಉದ್ಘಾಟನೆ ಮಾಡುತ್ತೀರಿ ಎಂಬುದೂ ಎಲ್ಲರ ಪ್ರಶ್ನೆ ಎಂದರು.
ಚಾಮುಂಡಿಬೆಟ್ಟ ಕೇವಲ ಹಿಂದುಗಳಿಗೆ ಸೇರಿದ್ದಲ್ಲ ಎಂಬ ಡಿಸಿಎಂ ಡಿಕೆಶಿ ಹೇಳಿಕೆಗೆ, ರಾಜಕಾರಣಿಗಳ ನಿಲುವು ದೇಶ, ಭಾಷೆ, ಧರ್ಮದ ನಿಲುವಲ್ಲ. ಅವರಿಗೆ ಪ್ರಗತಿಪರ ಚಿಂತನೆ ಇದ್ದರೆ ಇನ್ನು ಮುಂದೆ ಯಾವುದೇ ದೇವಸ್ಥಾನಕ್ಕೆ ಹೋಗಬಾರದು. ಯಾವುದೇ ಧರ್ಮದವರನ್ನು ಓಲೈಸುವ ಹೇಳಿಕೆ ನೀಡಬಾರದು. ಬಾಯಿಗೆ ಬಂದ ಹಾಗೆ ಹೇಳಿಕೆ ನೀಡುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂದರು.