

ಬಾಗಲಕೋಟೆ : ಸಾಂಸ್ಕೃತಿಕ ರಾಷ್ಟ್ರೀಯತೆಯ ಮೂಲಕ ರಾಜ್ಯ ರಾಜ್ಯಗಳ ನಡುವೆ ಗಾಢವಾದ ಬಂಧುತ್ವವನ್ನು ಗಟ್ಟಿಗೊಳಿಸಬೇಕಾಗಿದೆ ಎಂದು ಬಾಗಲಕೋಟೆ ಸಾಹಿತಿ ಡಾ. ಪ್ರಕಾಶ ಖಾಡೆ ಹೇಳಿದರು.
ಶನಿವಾರ ಅಂಡಮಾನದ ಪೋರ್ಟ್ ಬ್ಲೇರ್‌ದಲ್ಲಿ ಮಂಗಳೂರಿನ ಮಂಜುನಾಥ ಎಜುಕೇಷನ್ ಟ್ರಸ್ಟ್ ಹಾಗೂ ಹೃದಯವಾಹಿನಿ ಕರ್ನಾಟಕ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪೋರ್ಟಬ್ಲೇರ್‌ನ ಕನ್ನಡ ಸಂಘ ಹಮ್ಮಿಕೊಂಡಿದ್ದ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಥಳೀಯ ಭಾಷೆ, ಸಂಸ್ಕೃತಿ, ಸಂಪ್ರದಾಯ, ಆಚರಣೆ, ಜಾನಪದ ಮತ್ತು ದೇಸಿ ಜ್ಞಾನವನ್ನು ರಾಜ್ಯ ರಾಜ್ಯಗಳ ನಡುವೆ ವಿನಿಮಯ ಮಾಡುತ್ತ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ವ್ಯಾಪಕಗೊಳಿಸಬೇಕಾಗಿದೆ ಎಂದು ಹೇಳಿದರು.
ಕವಿಗೋಷ್ಠಿಯಲ್ಲಿ ಸಮ್ಮೇಳನಾಧ್ಯಕ್ಷ ಡಾ. ಅರ್ಚನಾ ಅಥಣಿ, ಪ್ರೊ. ಬಿಂಡಿಗನವೀಲೆ ಭಗವಾನ, ಆರೀಫ್ ಕಲ್ಕಟ್ಟ, ಆರತಿ ಸುರೇಶ ಮತ್ತು ಮನು ಮಂಗಳೂರು ತಮ್ಮ ಕವಿತೆ ವಾಚಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಅಧ್ಯಕ್ಷ ಕೆ.ಪಿ. ಮಂಜುನಾಥ ಸಾಗರ, ಅಂಡಮಾನ ಕನ್ನಡ ಸಂಘದ ಕಾರ್ಯದರ್ಶಿ ರೋನಿಕಾ, ಸಂಗೀತ ಮತ್ತು ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭ ಧನಂಜಯ, ವಿಶ್ರಾಂತ ಜಿಲ್ಲಾಧಿಕಾರಿ ಡಾ. ಡಿ.ಎಸ್. ವಿಶ್ವನಾಥ, ಹಾಸ್ಯ ಕಲಾವಿದ ಮಹಾದೇವ ಸತ್ತಿಗೇರಿ, ಗಾಯಕ ಗೊ.ನಾ. ಸ್ವಾಮಿ ಮೊದಲಾದವರು ಪಾಲ್ಗೊಂಡಿದ್ದರು.