

ಬಿಡದಿ: ಕೈಗಾರಿಕಾ ಪ್ರದೇಶಗಳಲ್ಲಿರುವ ಕಾರ್ಖಾನೆಗಳು ತಮ್ಮ ಸಿಎಸ್ಆರ್ ನಿಧಿಯನ್ನು ಹೆಚ್ಚಾಗಿ ನಮ್ಮ ಕ್ಷೇತ್ರಕ್ಕೆ ಬಳಕೆ ಮಾಡಬೇಕು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ತಾಕೀತು ಮಾಡಿದರು.
ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿರುವ ಕೈಗಾರಿಕೋದ್ಯಮಿಗಳ ಅಸೋಸಿಯೇಷನ್ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿವಿಧ ಕಾರ್ಖಾನೆಗಳ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿ, ಕೈಗಾರಿಕೆಗಳಿಗೆ ಬೇಕಿರುವ ಮೂಲಸೌಕರ್ಯ ಒದಗಿಸಲು ನಾನು ಬದ್ಧನಾಗಿದ್ದೇನೆ. ಈ ಕೈಗಾರಿಕಾ ಪ್ರದೇಶ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕಾರಣ ಇಲ್ಲಿನ ಕಂಪನಿಗಳು ಹಾಗೂ ಕಾರ್ಖಾನೆಗಳು ತಮ್ಮ ಸಾಮಾಜಿಕ ಹೊಣೆಗಾರಿಕೆ ಅಡಿ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಗಳ ಉನ್ನತಿಕರಣ, ಶುದ್ಧ ಕುಡಿಯುವ ನೀರಿನ ಟಕಗಳನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಅನುದಾನ ಬಳಕೆ ಮಾಡಬೇಕು ಎಂದರು.
ಕೈಗಾರಿಕಾ ಪ್ರದೇಶದಲ್ಲಿನ ಸಮಸ್ಯೆಗಳ ಬಗ್ಗೆ ಇಲ್ಲಿಯವರೆಗೂ ಯಾರು ಕೂಡ ನನ್ನ ಬಳಿ ಚರ್ಚೆ ಮಾಡಿಲ್ಲ. ನನ್ನ ಸೇವೆಯನ್ನು ನೀವು ಉಪಯೋಗಿಸಿಕೊಳ್ಳಬೇಕು. ನಿಮ್ಮ ಸೇವೆಯನ್ನು ನಾನು ಬಳಕೆ ಮಾಡಿಕೊಳ್ಳಬೇಕು. ಹಾಗಾದಾಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ ಎಂದರು.
ರಾಜಕಾರಣಿಗಳ ಬಳಿ ಹೋದರೆ ಏನಾದರೂ ಅಪೇೆ ಪಡುತ್ತಾರೆ ಎಂಬ ಭಾವನೆ ಕೆಲ ಕಂಪನಿಗಳ ಮಾಲೀಕರ ಮನಸ್ಸಿನಲ್ಲಿದೆ. ಆದರೆ, ನಾನು ನನ್ನ ಶಾಸಕ ಸ್ಥಾನದ ಅವಧಿಯಲ್ಲಿ ಯಾವುದೇ ಕಂಪನಿಗಳಿಂದ ಹಣ ವಸೂಲಿ ಮಾಡಿಲ್ಲ. ಜನಪ್ರತಿನಿಧಿಗಳ ಬಳಿಗೆ ಹೋಗದೆ ಅಧಿಕಾರಿಗಳ ಬಳಿ ಹೋಗಿ ತಮ್ಮ ಕೆಲಸ ಮಾಡಿಸಿಕೊಳ್ಳುವ ಮನೋಭಾವನೆ ಬೆಳೆಸಿಕೊಂಡಿದ್ದಾರೆ, ಇದು ಸರಿಯಾದ ಕ್ರಮವಲ್ಲ ಎಂದು ಬೇಸರ ವ್ಯಕ್ತಪಡಿಸಿದರು.