ಮಕ್ಕಳು ಉನ್ನತ ಹುದ್ದೆ ಅಲಂಕರಿಸಲಿ

28-JAN-GPT-1
ಗುಂಡ್ಲುಪೇಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಅಸ್ಪೃಶ್ಯತೆ ನಿರ್ಮೂಲನಾ ಜಾಗೃತಿ ಮತ್ತು ವಿಚಾರಗೋಷ್ಠಿ ಕಾರ್ಯಕ್ರಮವನ್ನು ಜ್ಞಾನಪ್ರಕಾಶ ಸ್ವಾಮೀಜಿ ಉದ್ಘಾಟಿಸಿದರು. ಟಿ.ರಮೇಶ್ ಬಾಬು, ಮೋಹನ್ ಕುಮಾರ್, ಷಣ್ಮುಗಂ, ಪರಶಿವಮೂರ್ತಿ, ಕೆ.ಪಿ.ವಸಂತಕುಮಾರಿ, ಅಣ್ಣಯ್ಯಸ್ವಾಮಿ, ಸುಭಾಷ್ ಮಾಡ್ರಹಳ್ಳಿ, ಸೋಮಣ್ಣ, ಸುರೇಶ್ ನಾಯ್ಕ ಇದ್ದರು.
Published on

ಗುಂಡ್ಲುಪೇಟೆ: ಹಿಂದುಳಿದ ವರ್ಗಗಳ ಜನರು ತಮ್ಮ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸಿ ಉನ್ನತ ಹುದ್ದೆ ಪಡೆದುಕೊಂಡರೆ ಮಾತ್ರ ಸಮಾಜದಲ್ಲಿ ಅಸ್ಪಶ್ಯತೆ ತನ್ನಿಂದ ತಾನೇ ನಿರ್ಮೂಲನೆಯಾಗುತ್ತದೆ ಎಂದು ಉರಿಲಿಂಗಿ ಪೆದ್ದಿಮಠದ ಪೀಠಾಧಿಪತಿ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ಮಂಗಳವಾರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಅಸ್ಪೃಶ್ಯತೆ ನಿರ್ಮೂಲನಾ ಜಾಗೃತಿ ಮತ್ತು ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

ಜ್ಞಾನಕ್ಕೆ ಅಪಾರವಾದ ಶಕ್ತಿಯಿದ್ದು ಜ್ಞಾನ ಸಂಪಾದನೆಯಿಂದ ಜಗತ್ತನ್ನು ಆಳಬಹುದು. ಹೆಣ್ಣನ್ನು ಭೋಗದ ವಸ್ತುವೆಂದು ತಿಳಿದಿದ್ದ ಸಮಾಜಕ್ಕೆ ಅಂಬೇಡ್ಕರ್ ಸಂವಿಧಾನದಲ್ಲಿ ಸಮಾನ ಹಕ್ಕುಗಳನ್ನು ನೀಡಿ ಹೆಣ್ಣುಮಕ್ಕಳು ಶಿಕ್ಷಣ ಪಡೆಯುವಂತೆ ಮಾಡಿ ಉನ್ನತ ಸ್ಥಾನಕ್ಕೇರುವಂತೆ ಮಾಡಿದರು. ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಜಾತೀಯ ವಿಷಬೀಜಗಳನ್ನು ತುಂಬಿ ಕಲುಷಿತಗೊಳಿಸಲಾಗಿದೆ. ಭಾರತವನ್ನು ಬಲಿಷ್ಠ ದೇಶವನ್ನಾಗಿ ಮಾಡಬೇಕಾದರೆ ಎಲ್ಲರೂ ನಾವೆಲ್ಲ ಒಂದೇ ಎಂದು ಭಾವಿಸುವಂತಾಗಬೇಕು ಎಂದು ಹೇಳಿದರು.

ಸಾಹಿತಿ ಡಾ.ಕೃಷ್ಣಮೂರ್ತಿ ಚಮರಂ ಮಾತನಾಡಿ, ಹಿಂದಿನಿಂದಲೂ ಜಾತಿ ಜಾತಿಗಳ ನಡುವೆ ಕಂದಕ ಹಾಗೂ ಅಸ್ಪೃಷ್ಯತೆ ಆಚರಣೆಯಿಂದ ದುರ್ಬಲವಾಗಿದ್ದ ಭಾರತದ ಮೇಲೆ ವಿದೇಶಿಯರು ಪದೇ ಪದೆ ದಾಳಿ ಮಾಡುತ್ತಿದ್ದರು. ಭಾರತೀಯ ಜನರ ದೌರ್ಬಲ್ಯದ ಅರಿವಿದ್ದ ಕಾರಣ ಶತಮಾನಗಳ ಕಾಲ ಆಳ್ವಿಕೆ ನಡೆಸಿದ್ದರು. ಸಂವಿಧಾನದಲ್ಲಿ ಎಲ್ಲರಿಗೂ ಸಮಾನತೆ ನೀಡಿದ್ದರೂ ಇಂದಿಗೂ ಗ್ರಾಮಾಂತರ ಪ್ರದೇಶಗಳಲ್ಲಿ ಅಸ್ಪಶ್ಯತೆ ಚಾಲ್ತಿಯಲ್ಲಿದೆ. ಇದರ ಬಗ್ಗೆ ಇನ್ನೂ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ ಎಂದು ಹೇಳಿದರು.

ತಹಸೀಲ್ದಾರ್ ಟಿ.ರಮೇಶ್ ಬಾಬು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ತಾಪಂ ಇಒ ಷಣ್ಮುಗಂ, ಸರ್ಕಲ್ ಇನ್ಸ್‌ಪೆಕ್ಟರ್ ಪರಶಿವಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ, ಸದಸ್ಯರಾದ ಅಣ್ಣಯ್ಯಸ್ವಾಮಿ, ರಾಜಗೋಪಾಲ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಮಲ್ಲೇಶ್, ಮಾನವ ಬಂಧುತ್ವ ವೇದಿಕೆಯ ಸುಭಾಷ್ ಮಾಡ್ರಹಳ್ಳಿ, ಸೋಮಣ್ಣ, ಸುರೇಶ್ ನಾಯ್ಕ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net