ಸಂಗೀತ ಕ್ಷೇತ್ರದಲ್ಲೂ ಮಕ್ಕಳು ಆಸಕ್ತಿ ಬೆಳೆಸಿಕೊಳ್ಳಲಿ

ಸಂಗೀತ ಕ್ಷೇತ್ರದಲ್ಲೂ ಮಕ್ಕಳು ಆಸಕ್ತಿ ಬೆಳೆಸಿಕೊಳ್ಳಲಿ
Published on

ಸೋಮವಾರಪೇಟೆ: ಕಲೆ ಮತ್ತು ಸಂಗೀತಕ್ಕೆ ಅವಿನಾಭಾವ ಸಂಬಂಧವಿದ್ದು, ಸಂಗೀತ ಕ್ಷೇತ್ರದಲ್ಲೂ ಮಕ್ಕಳು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರಳೀಧರ್ ಹೇಳಿದರು.

ಕನ್ನಡ ಸಿರಿ ಸ್ನೇಹ ಬಳಗದ ಜಿಲ್ಲಾ ಹಾಗೂ ತಾಲೂಕು ಘಟಕ ಮತ್ತು ಶ್ರೀ ವಿದ್ಯಾ ಇನ್‌ಸ್ಟಿಟ್ಯುಟ್ ಆಫ್ ಹೆಲ್ತ್ ಕೇರ್ ಟ್ರೈನಿಂಗ್ ಸೆಂಟರ್ ವತಿಯಿಂದ ಟ್ರೈನಿಂಗ್ ಸೆಂಟರ್ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಶುಕ್ರವಾರ ನಡೆದ ಗಾನ ಲಹರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಹಿತ್ಯ ಮತ್ತು ಸಂಗೀತವು ಸುಸಂಸ್ಕೃತ ಸಮಾಜ ನಿರ್ಮಾಣಕ್ಕೂ ಅಡಿಗಲ್ಲಾಗಿವೆ. ಸಂಗೀತಕ್ಕೆ ಸೆಳೆಯುವ ಹಾಗೂ ಸಾಹಿತ್ಯಕ್ಕೆ ಒಂದುಗೂಡಿಸುವ ಶಕ್ತಿಯಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಎಚ್.ಹುಚ್ಚೇಗೌಡ ಮಾತನಾಡಿ, ಕನ್ನಡವು ನಮ್ಮ ಬದುಕಿನಲ್ಲಿ ಪ್ರತಿನಿತ್ಯ ಹಾಸುಹೊಕ್ಕಾಗಬೇಕು. ವೈಭವೀಕರಣ ಮತ್ತು ಆತಂಕದ ನಡುವೆ ಕನ್ನಡ ಭಾಷೆ ಇರುವಂತೆ ಭಾಸವಾದರೂ, ಕನ್ನಡವನ್ನು ಬಳಸುವ ಮೂಲಕ ಆತಂಕವನ್ನು ದೂರಾಗಿಸಬೇಕು ಎಂದರು.

ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಎಚ್.ಜೆ. ಜವರಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಟ್ರೈನಿಂಗ್ ಸೆಂಟರ್‌ನ ಅಲೀಮಾ ಸುಲೈಮಾನ್, ಹಿರಿಯ ಕಲಾವಿದ ಪೀಟರ್, ಕನ್ನಡ ಸಿರಿಸ್ನೇಹ ಬಳಗದ ಶರ್ಮಿಳಾ ರಮೇಶ್, ಎಲ್.ಎಂ. ಪ್ರೇಮಾ, ಸಿ.ಕೆ. ಮಲ್ಲಪ್ಪ ಸೇರಿದಂತೆ ಮತ್ತಿತರರು ಇದ್ದರು. ಬಳಗದ ಗೀತಾಂಜಲಿ ಮಹೇಶ್, ಟ್ರೈನಿಂಗ್ ಸೆಂಟರ್‌ನ ಮಂಜುಳಾ ಅವರು ಕಾರ್ಯಕ್ರಮ ನಿರ್ವಹಿಸಿದರು.

ಸ್ಥಳೀಯ ಗಾಯಕರಿಂದ ಮೂಡಿಬಂದ ಕನ್ನಡ ಚಿತ್ರಗೀತೆಗಳ ಗಾಯನ ಎಲ್ಲರ ಮನಸೂರೆಗೊಳ್ಳುವಂತೆ ಮಾಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net