

ಮಾಗಡಿ : ರಾಮನಗರ ಜಿಲ್ಲೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ಸೋಲೂರು ಹೋಬಳಿಯು ಯಾವ ಜಿಲ್ಲೆಗೆ ಸೇರಬೇಕು ಎಂಬ ವಿಚಾರ ಎರಡೂ ಜಿಲ್ಲೆಯಲ್ಲಿ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಜನರ ಅಭಿಪ್ರಾಯ ಸಂಗ್ರಹಿಸಲು ಸೋಲೂರು ಕಲ್ಯಾಣ ಮಂಟಪದಲ್ಲಿ ನೆಲಮಂಗಲ ಶಾಸಕ ಎನ್. ಶ್ರೀನಿವಾಸ್ ಹಾಗೂ ರಾಮನಗರ ಜಿಲ್ಲೆಯ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಶುಕ್ರವಾರ ಸಭೆ ಆಯೋಜಿಸಲಾಗಿತ್ತು.
ಈ ಹಿಂದೆ ಅಖಂಡ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿದ್ದ ರಾಮನಗರ ತಾಲೂಕು ಜಿಲ್ಲೆಯಾಗಿ ಘೋಷಣೆಯಾದ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿದ್ದ ರಾಮನಗರ, ಮಾಗಡಿ, ಕನಕಪುರ ಚನ್ನಪಟ್ಟಣ ತಾಲೂಕುಗಳನ್ನೊಳಗೊಂಡು 2007ರಲ್ಲಿ ರಾಮನಗರ ಜಿಲ್ಲೆಯಾಗಿ ಘೋಷಣೆ ಮಾಡಲಾಯಿತು, ಈ ನಡುವೆ 2008ರಲ್ಲಿ ವಿಧಾನಸಭಾ ಕ್ಷೇತ್ರ ಮರುವಿಂಗಡಣೆ ವೇಳೆಯಲ್ಲಿ ಸೋಲೂರನ್ನು ಮಾಗಡಿ ಕ್ಷೇತ್ರಕ್ಕೆ ಸೇರ್ಪಡೆಮಾಡಿಕೊಳ್ಳಲು ಸಾಕಷ್ಟು ಅವಕಾಶಗಳಿದ್ದರೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸೋಲೂರು ಹೋಬಳಿ ನಾಗರಿಕರು ಅತಂತ್ರ ಪರಿಸ್ಥಿತಿ ಎದುರಿಸವಂತಾಗಿದೆ. ಪ್ರಸ್ತುತ ಚಾಲ್ತಿಗೆ ಬಂದಿರುವ ಸೋಲೂರು ಹೋಬಳಿ ನೆಲಮಂಗಲಕ್ಕೆ ಸೇರ್ಪಡೆ ವಿಚಾರವಾಗಿ ಸೋಲೂರು ಭಾಗದ ಜನರು ಅಭಿವೃದ್ಧಿ ದೃಷ್ಟಿಯಿಂದ ಪಕ್ಷಾತೀತವಾಗಿ, ನೆಲಮಂಗಲ ತಾಲೂಕಿಗೆ ಸೇರ್ಪಡೆಯಾಗಲಿ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ನೆಲಮಂಗಲ ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ಚುನಾವಣೆ ವೇಳೆ ನುಡಿದಂತೆ ಸೋಲೂರು ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸುತ್ತೇನೆ. ಸೋಲೂರು ಹೋಬಳಿ ಅಭಿವೃದ್ಧಿಗೆ ಈಗಾಗಲೇ 100 ಕೋಟಿ ರೂ.ಗೂ ಹೆಚ್ಚು ಅನುದಾನ ಬಿಡುಗಡೆ ಮಾಡಿಸಲಾಗಿದೆ. ಹಲವು ಕಾಮಗಾರಿಗಳು ಸಹ ಪ್ರಗತಿಯಲ್ಲಿವೆ. ಮುಖ್ಯಮಂತ್ರಿಗಳು ಸಹ ಸೋಲೂರು ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸಲು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶೀಘ್ರದಲ್ಲೇ ಸೋಲೂರು ನೆಲಮಂಗಲ ತಾಲೂಕಿಗೆ ಸೇರ್ಪಡೆಯಾಗಲಿದೆ ಎಂದರು.
ಉಪವಿಭಾಗಾಧಿಕಾರಿ ಪಿ.ಕೆ.ಬಿನೋಯ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ, ಮಾಜಿಶಾಸಕ ಡಾ.ಕೆ.ಶ್ರೀನಿವಾಸ್ ಮೂರ್ತಿ, ಎಂ.ನಾರಾಯಣಗೌಡ, ಸದಸ್ಯ ರಂಗಸ್ವಾಮಿ, ಬೂದಿಹಾಳ್ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಕೆ.ನಾಗರಾಜ್, ನಾಗರಾಜು, ಪ್ರೆಸ್ ಕ್ಲಬ್ ಕೌನ್ಸಿಲ್ ತಾಲೂಕು ಅಧ್ಯಕ್ಷ ಟಿ.ಜಿ.ಗಂಗಾಧರ್, ಜಿಪಂ ಮಾಜಿ ಸದಸ್ಯ ಎಸ್‌ಸಿಬಿಎಸ್ ಶಿವರುದ್ರಯ್ಯ, ಸೋಲೂರು ಗ್ರಾಪಂ ಮಾಜಿ ಅಧ್ಯಕ್ಷ ನಾಗರುದ್ರಶರ್ಮಾ, ತಾಪಂ ಮಾಜಿ ಅಧ್ಯಕ್ಷ ಎಂ.ನಾಗರಾಜು, ಮುಖಂಡರಾದ ಅರಸನಕುಂಟೆ ಗುರುಪ್ರಸಾದ್ ಮತ್ತಿತರರು ಇದ್ದರು.
ಅಭಿವೃದ್ಧಿಯಲ್ಲಿ ತಾರತಮ್ಯ
ಸೋಲೂರು ಹೋಬಳಿ ಮತದಾರರು ಮಾಗಡಿ ಶಾಸಕರಿಗೆ ಮತದಾನ ಮಾಡದ ಕಾರಣಕ್ಕೆ ಅಭಿವೃದ್ಧಿಯಲ್ಲಿ ಶಾಸಕ ಬಾಲಕೃಷ್ಣ ತಾರತಮ್ಯ ಮಾಡುತ್ತಿದ್ದಾರೆ. ಹಾಗಾಗಿ ಅಭಿವೃದ್ಧಿ ದೃಷ್ಟಿಯಿಂದ ಸೋಲೂರು ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸುವುದು ಸೂಕ್ತ ಎಂದು ಪ್ರೆಸ್ ಕ್ಲಬ್ ಕೌನ್ಸಿಲ್ ತಾಲೂಕು ಅಧ್ಯಕ್ಷ ತಾಂಡೇನಪುರ ಗಂಗಾಧರ್ ಸಭೆಯಲ್ಲಿ ಹೇಳಿದರು.