

ಸಿದ್ದಾಪುರ: ತಾಲೂಕಿನ ಬಿದ್ರಕಾನ ಗ್ರಾಪಂ ವ್ಯಾಪ್ತಿಯ ಹೀನಗಾರ ಗೊದ್ಲಬೀಳ ರಸ್ತೆಯಲ್ಲಿ ಮಂಗಳವಾರ ಸಂಜೆ ಚಿರತೆ ಕಾಣಿಸಿಕೊಂಡಿದ್ದು ಜನತೆ ಆತಂಕಗೊಂಡಿದ್ದಾರೆ.
ಚಿಟ್ಟೆ ಚಿಟ್ಟೆ ಚಿರತೆಯೊಂದು ಹಲವು ತಿಂಗಳುಗಳಿಂದ ಈ ಭಾಗದ ಸುತ್ತಮುತ್ತ ಓಡಾಡುತ್ತಿದ್ದು, ಯಾವ ಸಮಯದಲ್ಲಿ ಎಲ್ಲಿ ಇರುತ್ತದೆ ಎಂದು ತಿಳಿಯುತ್ತಿಲ್ಲ. ತೋಟ, ಗದ್ದೆ, ಬೆಟ್ಟಗಳಲ್ಲಿ ಚಿರತೆ ಓಡಾಡುತ್ತಿರುವುದರಿಂದ ಮನೆಯಿಂದ ಹೊರ ಹೋಗಲು ಜನತೆ ಹಿಂದೇಟು ಹಾಕುವಂತಾಗಿದೆ.
ಚಿರತೆಯೊಂದಿಗೆ ನಿತ್ಯ ಕಾಡುಕೋಣಗಳ ಹಿಂಡು ಹಗಲು ಹಾಗೂ ಸಂಜೆ ಸಮಯದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಜನತೆ ಜಾಗ್ರತೆ ವಹಿಸಿ ಓಡಾಡುವಂತಾಗಿದೆ. ಸಂಬಂಧ ಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೆ ಚಿರತೆ ಹಾಗೂ ಕಾಡುಕೋಣಗಳ ಹಿಂಡನ್ನು ಬೇರೆಡೆಗೆ ಓಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.