

ಹನೂರು: ತಾಲೂಕಿನ ಗಂಗನದೊಡ್ಡಿ ಭಾಗದಲ್ಲಿ ಕಳೆದ 2 ತಿಂಗಳಿನಿಂದಲೂ ಮೇಕೆ ಹಾಗೂ ಕೋಳಿಗಳನ್ನು ಬಲಿ ಪಡೆಯುತ್ತಿರುವ ಚಿರತೆ ಮಂಗಳವಾರ ಬೆಳಗ್ಗೆಯೇ ಅಂಬಿಕಾಪುರ ಗ್ರಾಮದಲ್ಲಿ ಎರಡು ಮರಿಗಳೊಂದಿಗೆ ಕಾಣಿಸಿಕೊಂಡಿದ್ದು, ಜನರನ್ನು ಇನ್ನಷ್ಟು ಭಯಭೀತರನ್ನಾಗಿಸಿದೆ.
ಈ ಭಾಗದಲ್ಲಿ ಕಳೆದ 2 ತಿಂಗಳಿನಿಂದಲೂ ದಾಳಿ ನಡೆಸುತ್ತಿದ್ದ ಚಿರತೆ ಐದಾರು ಮೇಕೆ ಹಾಗೂ ಕೋಳಿಗಳನ್ನು ಬಲಿ ಪಡೆದಿತ್ತು. ಬಳಿಕ ಅರಣ್ಯ ಇಲಾಖೆ ಎಚ್ಚೆತ್ತು ಮುಂಜಾಗ್ರತಾ ಕ್ರಮವಾಗಿ ಗಂಗನದೊಡ್ಡಿಯಲ್ಲಿ ಬೋನು ಅಳವಡಿಸಿತ್ತು. ಚಿರತೆ ಬೋನಿಗೆ ಬೀಳುತ್ತಿರಲಿಲ್ಲ. ಬಳಿಕ 15 ದಿನದ ಹಿಂದೆ ಗಂಗನದೊಡ್ಡಿ ಗ್ರಾಮದ ಜಮೀನೊಂದರಲ್ಲಿ ಮೇಕೆಯನ್ನು ಬಲಿ ಪಡೆದಿದ್ದ ಚಿರತೆ ಭೈರಪ್ಪ ಎಂಬುವರ ಮನೆಯ ಗೇಟ್ ಬಳಿ ಬಂದು ತೆರಳಿತ್ತು. ಈ ಬಗ್ಗೆ ಸುದ್ದಿ ತಿಳಿದು ಆರ್‌ಎಫ್‌ಒ ಪ್ರವೀಣ್ ಗ್ರಾಮಕ್ಕೆ ಬಂದಿದ್ದರು. ಚಿರತೆ ಪತ್ತೆಗೆ ಡ್ರೋನ್ ಕ್ಯಾಮರಾ ಬಳಕೆ ಮಾಡುತ್ತಿದ್ದರೂ ಚಿರತೆ ಪತ್ತೆಯಾಗಿರಲಿಲ್ಲ. ಮತ್ತೆ ಜ.6ರ ರಾತ್ರಿ ಅಂಬಿಕಾಪುರ ಗ್ರಾಮದ ಪ್ರತ್ಯೇಕ ಜಮೀನಿನಲ್ಲಿ 2 ಮೇಕೆಯನ್ನು ಚಿರತೆ ಬಲಿ ಪಡೆದಿತ್ತು. ಈ ವೇಳೆ ರೈತರ ಒತ್ತಾಯದ ಹಿನ್ನೆಲೆ ಗಂಗನದೊಡ್ಡಿಯ ಭೈರಪ್ಪ ಎಂಬುವರ ಜಮೀನಿನಲ್ಲಿ ತುಮಕೂರು ಕೇಜ್ ಬೋನು ಅಳವಡಿಸಿ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸುವುದರ ಮೂಲಕ ಅರಣ್ಯ ಇಲಾಖೆ ಚಿರತೆ ಸೆರೆಗೆ ಕ್ರಮವಹಿಸಿತ್ತು. ಆದರೆ, ಚಿರತೆ ಬೋನಿಗೆ ಬೀಳದೆ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಚಿರತೆ ಮಂಗಳವಾರ ಬೆಳಗ್ಗೆ 8.15ರಲ್ಲಿ ಅಂಬಿಕಾಪುರ ಗ್ರಾಮದ ಜಭಿವುಲ್ಲಾ ಎಂಬುವರ ಜಮೀನಿನಲ್ಲಿ 2 ಮರಿಗಳೊಂದಿಗೆ ಕಾಣಿಸಿಕೊಂಡಿದ್ದು, ಜನರನ್ನು ಮತ್ತಷ್ಟು ಗಾಬರಿಗೊಳಿಸಿದೆ.
ಈ ಬಗ್ಗೆ ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜಾದ್ ಖಾನ್ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದರು. ಸ್ಥಳಕ್ಕಾಗಮಿಸಿದ ಅರಣ್ಯ ರಕ್ಷಕ ಅಶೋಕ್ ಹಾಗೂ ಸಿಬ್ಬಂದಿ ಪ್ರತ್ಯಕ್ಷದರ್ಶಿ ರೇಷ್ಮಾ ಅವರಿಂದ ಮಾಹಿತಿ ಪಡೆದರು.