

ಕುಮಟಾ: ಬಾಡದಲ್ಲಿ ಒಂದುವರೆ ದಿನದಿಂದ ಸೇಷ್ಟಿಯಾಗಿದ್ದ ಭಯದ ವಾತಾವರಣ ಅಂತೂ ತಿಳಿಯಾಗಿದೆ. ಡೇಂಜರ್ ಚಿರತೆಯ ಎಚ್ಚರ ತಪ್ಪಿಸಿ ಸೆರೆ ಹಿಡಿಯಲಾಗಿದೆ. ತಾಲೂಕಿನ ಬಾಡದ ಮಾದರಿ ರಸ್ತೆಯಲ್ಲಿ ಮನುಷ್ಯರ ಮೇಲೆ ದಾಳಿ ಮಾಡಿ ಮನೆಯೊಂದರೊಳಗೆ ಅವಿತು ಆತಂಕ ಹುಟ್ಟಿಸಿದ್ದ ಚಿರತೆಯನ್ನು 24 ಗಂಟೆಗಳ ಬಳಿಕ ಕೊನೆಗೂ ಸೆರೆ ಹಿಡಿಯಲಾಗಿದೆ.
ಶಿವಮೊಗ್ಗದಿಂದ ಬಂದ ಅರವಳಿಕೆ ತಜ್ಞ ಡಾ. ಅಭಿಲಾಷ ಅವರ ನೇತೃತ್ವದ ತಂಡ ಅರಿವಳಿಕೆ ಚುಚ್ಚುಮದ್ದನ್ನು ಗನ್‌ನಿಂದ ಶೂಟ್ ಮಾಡಿ ಚಿರತೆಯನ್ನು ಎಚ್ಚರ ತಪ್ಪುವಂತೆ ಮಾಡಿದ್ದಾರೆ. ಬಳಿಕ ಅರಣ್ಯ ಮತ್ತು ಪೊಲೀಸ ಸಿಬ್ಬಂದಿ ಚಿರತೆಯನ್ನು ಅದು ಅವಿತಿದ್ದ ಮನೆಯೊಳಗಿಂದ ಸುರಕ್ಷಿತವಾಗಿ ಮನೆಯಿಂದ ಹೊರತಂದಿದ್ದಾರೆ. ಚಿರತೆಯನ್ನು ಬೋನಿನಲ್ಲಿಟ್ಟು ಮುಂದಿನ ಹಂತದ ಚಿಕಿತ್ಸೆ ನೀಡಿ ಸ್ಥಳಾಂತರಿಸುವ ಪ್ರಕ್ರಿಯೆ ನಡೆಸಲಾಗುತ್ತಿದೆ.
ಶುಕ್ರವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಮಹಾಬಲೇಶ್ವರ ನಾಯ್ಕರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದ ಚಿರತೆ, ಬಳಿಕ ಮನೆಯೊಂದರ ಒಳಹೊಕ್ಕು ಅಡಗಿ ಕುಳಿತಿತ್ತು. ಅದೇ ಮನೆಯ ಇನ್ನೊಂದು ಕೋಣೆಯಲ್ಲಿ ಸುಮಾರು 2 ತಾಸು ಸಿಲುಕಿಕೊಂಡಿದ್ದ ಜನರನ್ನು ರಾತ್ರಿ ಸುರಕ್ಷಿತವಾಗಿ ಹೊರತರಲಾಗಿತ್ತು. ಚಿರತೆ ಇರುವ ಮನೆಯ ಬಾಗಿಲು ಮುಚ್ಚಲಾಗಿತ್ತು.
ಬಲೆ ಹಾಗೂ ಬೋನು ತಂದು ಚಿರತೆ ಹಿಡಿಯಲು ರಾತ್ರಿಯಿಡೀ ನಡೆಸಿದ ಕಾರ್ಯಾಚರಣೆ ವಿಫಲವಾಗಿತ್ತು. ಹೀಗಾಗಿ ಅರವಳಿಕೆ ನೀಡಿ ಚಿರತೆ ಹಿಡಿಯವುದೊಂದೇ ಮಾರ್ಗ ಎಂದು ನಿರ್ಧರಿಸಿ ಶಿವಮೊಗ್ಗದ ಅರವಳಿಕೆ ತಜ್ಞರ ತಂಡಕ್ಕೆ ಮಾಹಿತಿ ನೀಡಲಾಗಿತ್ತು. ಆದರೆ, ಅರಿವಳಿಕೆ ತಜ್ಞರು ಶಿವಮೊಗ್ಗದಲ್ಲಿದ್ದು, ಅವರು ಶುಕ್ರವಾರ ಸಂಜೆಯಾಗುತ್ತಾ ಬಂದರೂ ಅರವಳಿಕೆ ತಂಡ ಬಾರದ ಹಿನ್ನೆಲೆಯಲ್ಲಿ ಸಾರ್ವಜನಿಕರು ಸ್ಥಳದಲ್ಲಿ ಪ್ರತಿಭಟಿಸಿ, ಅರಣ್ಯ ಇಲಾಖೆ ಹಾಗೂ ತಾಲೂಕಾಡಳಿತದ ನಿರಂತರ ವಿಳಂಬ ನೀತಿಗೆ ಆಕ್ರೋಶ ವ್ಯಕ್ತಪಡಿಸಿದರು.
ಚಿರತೆ ಬಂದು ಒಂದೂವರೆ ದಿನವಾದರೂ ಚಿರತೆ ಹಿಡಿಯುವಲ್ಲಿ ಸರಿಯಾದ ವ್ಯವಸ್ಥೆ, ಯೋಜನೆ, ಸ್ಪಷ್ಟತೆ, ಮುತುವರ್ಜಿ ಇರದ ಬಗ್ಗೆ ಖಂಡಿಸಿದರು. ಈ ವೇಳೆ ಸ್ಥಳದಲ್ಲಿದ್ದ ಅಧಿಕಾರಿಗಳು ಜನರಿಗೆ ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದರು. ಜನ ಪ್ರತಿಭಟಿಸುತ್ತಿದ್ದ ಕೆಲ ಹೊತ್ತಿನಲ್ಲೇ ಅರವಳಿಕೆ ತಜ್ಞರ ತಂಡ ಬಂದು ತಲುಪಿದ್ದು ಮುಂದಿನ ಕಾರ್ಯಾಚರಣೆಗೆ ಸ್ಥಳೀಯ ಸಾರ್ವಜನಿಕರು ಸಹಕರಿಸಿದರು. ಕೆಲ ನಿಮಿಷಗಳಲ್ಲೇ ಕಾರ್ಯಾಚರಣೆ ಯಶಸ್ವಿಯಾಗಿ ಮುಗಿದು ಎಚ್ಚರ ತಪ್ಪಿದ ಚಿರತೆಯನ್ನು ಬೇರೆಡೆ ಸಾಗಿಸಲಾಯಿತು. ಈ ವೇಳೆ ಅರಣ್ಯ ಅಧಿಕಾರಿಗಳು, ಸಿಬ್ಬಂದಿ, ಪೊಲೀಸರು ಇದ್ದರು.
ಇದನ್ನೂ ಓದಿ: ಕುಮಟಾದಲ್ಲಿ ಇಬ್ಬರ ಮೇಲೆ ದಾಳಿ ಮಾಡಿದ ಚಿರತೆ!!
ಚಿರತೆಯನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ. ಅದರ ಆರೋಗ್ಯ ಪರೀಕ್ಷೆ ಮಾಡಿ ಕಾಡಿಗೆ ಬಿಡುವ ವ್ಯವಸ್ಥೆ ಮಾಡಲಾಗುವುದು. ವಸಂತ ರೆಡ್ಡಿ ಸಿಸಿಎಫ್, ಕೆರನಾ ವೃತ್ತ