

ಬಿಡದಿ: ಜಡೇನಹಳ್ಳಿಯಲ್ಲಿ ಶುಕ್ರವಾರ ತಡರಾತ್ರಿ ಚಿರತೆ ಪ್ರತ್ಯವಾಗಿ ಗ್ರಾಮಸ್ಥರಲ್ಲಿ ಆತಂಕ ಹುಟ್ಟಿಸಿದೆ.
ಚಿರತೆ ಗ್ರಾಮದಲ್ಲಿ ಓಡಾಟ ಮಾಡುತ್ತಿರುವುದನ್ನ ಗ್ರಾಮದ ಪುಟ್ಟರಾಜು ಅವರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಆಹಾರ ಅರಸಿ ಗ್ರಾಮದೊಳಗೆ ಶುಕ್ರವಾರ ರಾತ್ರಿ 12.30ರ ಸಮಯದಲ್ಲಿ ಬಂದಿದೆ.
ಪ್ರದಿಪ್ ಅವರ ಮನೆ ಮೇಲೆ ಹತ್ತಿ ನಾಯಿಗಳನ್ನ ನೋಡುತ್ತಾ ದಾಳಿಗೆ ಹೊಂಚು ಹಾಕಿದೆ. ಆದರೆ ನಾಯಿಗಳು ಕಾಣಿಸದ ಹಿನ್ನೆಲೆಯಲ್ಲಿ ಮನೆ ಮೇಲಿಂದ ಇಳಿದು ಹೋಗಿದೆ. ಚಿರತೆ ಕಾಣಿಸಿಕೊಂಡರುವ ಹಿನ್ನೆಲೆಯಲ್ಲಿ ಮನೆಯಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಮನೆಗಳ ಮುಂದೆ ಜಾನುವಾರು, ಮೇಕೆ, ಕುರಿಗಳನ್ನು ಕಟ್ಟಿ ಹಾಕಲು ಭಯ ಪಡುವಂತಾಗಿದೆ. ಚಿರತೆಯನ್ನು ಕೂಡಲೇ ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ವಾರದ ಹಿಂದೆ ಹೆಜ್ಜಾಲ ವಾಜರಹಳ್ಳಿ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಈ ಬಗ್ಗೆ ಮಾಹಿತಿ ಬರುತ್ತಿದಂತೆ ಹೆಜ್ಜಾಲದ ಬಳಿ ಈಗಾಗಲೇ ಬೋನು ಇರಿಸಲಾಗಿದೆ. ಆದರೆ, ಚಿರತೆ ಬೋನಿನತ್ತ ಸುಳಿದಿಲ್ಲ. ಇದೀಗ ಜಡೇನಹಳ್ಳಿಯಲ್ಲಿ ಕಾಣಿಸಿಕೊಂಡಿದೆ. ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಹೆಜ್ಜಾಲದ ಬಳಿ ಇಟ್ಟಿರುವ ಬೋನನ್ನ ಜಡೆನಹಳ್ಳಿಗೆ ಸ್ಥಳಾಂತರಿಸಲಾಗುವುದು. ಕುಂಬಳಗೂಡು ಅರಣ್ಯ ಪ್ರದೇಶದಿಂದ ಈ ಚಿರತೆ ಬಂದಿರುಬಹುದೆಂದು ಅಂದಾಜಿಸಲಾಗಿದೆ.
> ಭೈರವ, ಬಿಡದಿ ವಲಯ ಅರಣ್ಯಾಧಿಕಾರಿ