

ಅರಕಲಗೂಡು: ತಾಲೂಕಿನ ಹನ್ಯಾಳು ಗ್ರಾಮದಲ್ಲಿ ಕಾಣಿಸಿಕೊಂಡಿರುವ ಚಿರತೆ ಸೆರೆ ಹಿಡಿಯದೆ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ ಎಂದು ರೈತರು ದೂರಿದ್ದಾರೆ.
ಕಳೆದ ವಾರ ಊರ ಹೊರಭಾಗದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ತೋಟದ ಮನೆಯಲ್ಲಿ ಸಾಕುನಾಯಿ ಹೊತ್ತೊಯ್ದಿತ್ತು. ಪೊದೆಯಲ್ಲಿ ಅವಿತು ಅಲ್ಲಲ್ಲಿ ಅಡ್ಡಾಡುತ್ತಿರುವ ಚಿರತೆ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ. ರೈತಾಪಿ ವರ್ಗದ ಜಮೀನು ಬಳಿ ತೆರಳಲು ಭಯ ಪಡುವಂತಾಗಿದೆ.
ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ವಾರ ಊರ ಹೊರಭಾಗದಲ್ಲಿ ಬೋನು ಇರಿಸಿದ್ದರು. ಮತ್ತೆ ಇತ್ತ ತಲೆ ಹಾಕಿಲ್ಲ. ಚಿರತೆ ಸೆರೆ ಹಿಡಿಯದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಹೊರಭಾಗದಲ್ಲಿ ಕಳೆದ ವಾರ ಕಾಣಿಸಿಕೊಂಡಿದ್ದ ಚಿರತೆ ರೈತ ದರ್ಶನ್ ಅವರ ತೋಟದ ಮನೆ ನಾಯಿ ತಿಂದಿತ್ತು. ಬೋನು ಇರಿಸಲಾಗಿದೆ, ಗ್ರಾಮಕ್ಕೆ ತೆರಳಿ ಪರಿಶೀಲಿಸಲಾಗುವುದು ಎಂದು ಅರಣ್ಯ ಸಂರಕ್ಷಣಾಧಿಕಾರಿ ಗುರುಸ್ವಾಮಿ ತಿಳಿಸಿದ್ದಾರೆ.