

ಪಿ.ಡಿ. ಚಂದ್ರಶೇಖರ ಪಡುವಳಲು ಹಗರೆ
ಎರಡು ಮೂರು ವರ್ಷಗಳಿಂದ ಕಾಣಿಸಿಕೊಳ್ಳದ ಚಿರತೆ ಇದೀಗ ಆಹಾರ ಅರಸಿ ಗ್ರಾಮಗಳತ್ತ ಲಗ್ಗೆ ಇಡುತ್ತಿದ್ದು, ಮಲ್ಲಿಕಾರ್ಜುನಪುರ, ಕಲ್ಯಾಣಪುರ ಮತ್ತು ಸುತ್ತಮುತ್ತಲ ಗ್ರಾಮಗಳ ಜನರು ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಾದೀಹಳ್ಳಿ ಹೋಬಳಿ ಹಗರೆ ಅರಣ್ಯ ಸದ್ಯ ಚಿರತೆಗಳ ಆವಾಸಸ್ಥಾನವಾಗಿದೆ. ದಟ್ಟ ಕಾಡುಗಳ ನಡುವೆ ಪೊದೆಗಳು ಸಹ ಇವೆ. ಈ ಪೊದೆಗಳಲ್ಲಿ ಕಾಡುಹಂದಿ, ಚಿರತೆಗಳು ಸೇರಿಕೊಂಡಿದ್ದು, ಇವುಗಳ ಉಪಟಳ ಹೆಚ್ಚಾಗಿ ಅರಣ್ಯಕ್ಕೆ ಹೊಂದಿಕೊಂಡಿರುವ ಕಲ್ಯಾಣಪುರ, ಮಲ್ಲಿಕಾರ್ಜುನಪುರ, ಶಿವಯೋಗಿಪುರ, ಹೊಲಭಗೆರೆ, ಸಿದ್ದನಹಳ್ಳಿ, ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮಗಳ ಜನರು ಪ್ರತಿದಿನ ಜೀವಭಯದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅರಣ್ಯದೊಳಗಿದ್ದ ಚಿರತೆಗಳು ಇದೀಗ ಹಗಲು ವೇಳೆಯಲ್ಲೇ ನಾಡಿನತ್ತ ಮುಖ ಮಾಡಿರುವುದು ತಲೆನೋವಾಗಿ ಪರಿಣಮಿಸಿದೆ. ಅರಣ್ಯದ ಸಮೀಪ ತಿರುಗಾಡಲು ಕುರಿ, ದನಗಳನ್ನು ಮೇಯಿಸಲು, ಕೃಷಿ ಜಮೀನಿನಲ್ಲಿ ಕೆಲಸ ನಿರ್ವಹಿಸಲು ಜನರು ಆತಂಕಪಡುವಂತಾಗಿದೆ. ಮೂರು ತಿಂಗಳ ಅವಧಿಯಲ್ಲೇ ಐದಾರು ಕುರಿಗಳನ್ನು ಹೊತ್ತೊಯ್ದಿರುವ ಚಿರತೆ, ಇದೀಗ ಮನೆಯಲ್ಲಿ ಸಾಕಿರುವ ಕೋಳಿಗಳ ಬೇಟೆಗೆ ಮುಂದಾಗಿದೆ.
ಕರು ಮೇಲೆ ದಾಳಿ: 3 ತಿಂಗಳುಗಳಿಂದ ಮಲ್ಲಿಕಾರ್ಜುನಪುರ ಗ್ರಾಮದ ಸುತ್ತಮುತ್ತ ಹೆಚ್ಚಾಗಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಗ್ರಾಮದ ಚಂದ್ರಯ್ಯ ಎಂಬುವವರ ಕೊಟ್ಟಿಗೆಯಲ್ಲಿದ್ದ ನಾಲ್ಕು ಕುರಿಗಳನ್ನು ಎಳೆದೊಯ್ದಿದೆ. ಇದೇ ಗ್ರಾಮದ ದ್ರಾಕ್ಷಾಯಿಣಿ ಎಂಬುವವರು ದನ ಮೇಯಿಸಿಕೊಂದು ಸಂಜೆ ವಾಪಸಾಗುತ್ತಿದ್ದ ಸಂದರ್ಭ ಕರು ಮೇಲೆ ದಾಳಿ ಮಾಡಿದ್ದು, ಜೋರಾಗಿ ಕೂಗಿಕೊಂಡಿದ್ದರಿಂದ ಹೆದರಿ ಓಡಿದೆ.
ಬೋನಿಗೆ ಬೀಳದೆ ಕಣ್ಣಾಮುಚ್ಚಾಲೆ: ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಬೋನು ಇರಿಸಿದರೂ ಚಿರತೆ ಬೋನಿಗೆ ಬೀಳದೆ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸುತ್ತಿದೆ. ಮಲ್ಲಿಕಾರ್ಜುನಪುರದಲ್ಲಿ ಕೋಳಿ ಹಿಡಿಯಲು ಬಂದು ಉರುಳಿಗೆ ಸಿಲುಕಿ ತಪ್ಪಿಸಿಕೊಂಡು ಹೋಗಿತ್ತು. ಈಗ ಅದೇ ಸ್ಥಳದಲ್ಲಿ ಬೋನ್ ಇರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಒಂದು ತಿಂಗಳಿನಿಂದ ನಿರಂತರವಾಗಿ ಕೋಳಿ ಬೇಟೆಗೆ ಬರುತ್ತಿರುವ ಚಿರತೆ ಅರಣ್ಯ ಇಲಾಖೆಯ ಬೋನ್‌ಗೆ ಮಾತ್ರ ಬೀಳದಿರುವುದು ಚಿಂತೆಗೀಡು ಮಾಡಿದೆ.
ಜಮೀನುಗಳ ಬಳಿ ಪ್ರತ್ಯಕ್ಷ: ಶಿವಯೋಗಿಪುರ, ರಾಮಚಂದ್ರಪುರ ಗ್ರಾಮದ ಕೃಷಿ ಜಮೀನಿನಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಎರಡು-ಮೂರು ಚಿರತೆಗಳಿರಬಹುದು ಎಂದು ಗ್ರಾಮಸ್ಥರು ಹೇಳುತ್ತಾರೆ. ಜಮೀನಿನಲ್ಲಿ ಮೇಯಲು ಬಿಟ್ಟ ಹಸು, ಕುರಿಗಳ ಮೇಲೆ ನಿರಂತರ ದಾಳಿ ಮಾಡುತ್ತಿದ್ದು, ರೈತರನ್ನು ಚಿಂತೆಗೀಡು ಮಾಡಿದೆ. ಅಲ್ಲದೆ ಕಲ್ಯಾಣಪುರ ಗ್ರಾಮಕ್ಕೆ ತೆರಳುವ ರಸ್ತೆ ಮಧ್ಯೆ ಆಟೊ, ಬೈಕ್ ಸವಾರರಿಗೆ ಹಾಗೂ ಹೊಲದಲ್ಲಿ ಸಂಜೆ ವೇಳೆ ಕೆಲಸ ಮಾಡುವವರಿಗೆ ಚಿರತೆ ಕಾಣಿಸಿಕೊಂಡಿದೆ.
ಸಾರ್ವಜನಿಕರ ಆಕ್ರೋಶ: ಒಂದು ತಿಂಗಳಿನಿಂದ ವಿವಿಧೆಡೆ ಚಿರತೆ ನಿರಂತರ ದಾಳಿ ನಡೆಸುತ್ತಿದ್ದು, ಹಾನಿ ಉಂಟುಮಾಡುತ್ತಿದೆ. ರೈತರು, ಕೂಲಿ ಕಾರ್ಮಿಕರು ಜಮೀನುಗಳಲ್ಲಿ ಕೃಷಿ ಚಟುವಟಿಕೆ ನಿರ್ವಹಿಸಲು ಕಷ್ಟದ ಪರಿಸ್ಥಿತಿ ಎದುರಾಗಿದೆ. ಇಷ್ಟೆಲ್ಲಾ ಅನಾಹುತಗಳು ನಡೆದರೂ ಇಲಾಖೆ ಚಿರತೆ ಸೆರೆ ಹಿಡಿಯಲು ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಟಾಚಾರಕ್ಕೆೆ ಬೋನ್ ಇರಿಸಿದ್ದು, ಗಂಭೀರವಾಗಿ ಪರಿಗಣಿಸಿಲ್ಲ ಎಂದು ದೂರಿದ್ದಾರೆ.