ನಾಯಿ ಹೊತ್ತೊಯ್ದ ಚಿರತೆ

Published on

ಹಿರೀಸಾವೆ: ಹೋಬಳಿಯ ಉಳ್ಳಾವಳ್ಳಿ ಗ್ರಾಮದ ಹೊರವಲಯದಲ್ಲಿರುವ ತೋಟದ ಮನೆಯ ಅಂಗಳದಲ್ಲಿ ಮಲಗಿದ್ದ ನಾಯಿಯನ್ನು ಚಿರತೆ ಭಾನುವಾರ ರಾತ್ರಿ ಹೊತ್ತೊಯ್ದಿದೆ.


ತೋಟದ ಮಾಲೀಕ ಶೇಷಪ್ಪ ಅವರು ರಾತ್ರಿ 9 ಗಂಟೆ ಯಲ್ಲಿ ನಾಯಿಗೆ ಊಟ ಹಾಕಿದ ಬಳಿಕ ಮಲಗಿದ್ದರು. ಮಧ್ಯರಾತ್ರಿ 2 ಗಂಟೆ ಸುಮಾರಿನಲ್ಲಿ ನಾಯಿ ಜೋರಾಗಿ ಬೊಗಳಿದ ಶಬ್ದ ಕೇಳಿ ಹೊರ ಬಂದು ನೋಡಿದಾಗ ನಾಯಿ ಕಾಣೆಯಾಗಿತ್ತು. ಮರುದಿನ ಬೆಳಗ್ಗೆ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಚಿರತೆ ನಾಯಿಯನ್ನು ಹೊತ್ತೊಯ್ದಿರುವ ದೃಶ್ಯ ಸೆರೆಯಾಗಿದೆ.


ಸಮೀಪದ ನರಿಹಳ್ಳಿ ಕೆರೆ ಹಾಗೂ ಹಳ್ಳ-ಕೊಳ್ಳದ ಪ್ರದೇಶ ವ್ಯಾಪ್ತಿಯಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆಗೆ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರು ಮನವಿ ಮಾಡಿದ್ದಾರೆ.


ಈ ಸಂಬಂಧ ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಚನ್ನರಾಯಪಟ್ಟಣ ವಲಯ ಅರಣ್ಯಾಧಿಕಾರಿ ಎಂ.ಡಿ.ಪಲ್ಲವಿ, ಈ ಬಗ್ಗೆ ಇದುವರೆಗೂ ಯಾವುದೇ ದೂರು ಬಂದಿಲ್ಲ. ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಸ್ಥಳೀಯರಿಂದ ಮಾಹಿತಿ ಪಡೆದು ಚಿರತೆ ಸೆರೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net