ಹೊನ್ನಾವರದಲ್ಲಿ ಚಿರತೆ ಆತಂಕ

images
Published on

ವಿಜಯವಾಣಿ ಸುದ್ದಿಜಾಲ ಹೊನ್ನಾವರ

ತಾಲೂಕಿನಲ್ಲಿ ಮತ್ತೆ ಚಿರತೆ ಕಾಟ ಶುರುವಾಗಿದ್ದು ಅರಣ್ಯದಲ್ಲಿ ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಚಿರತೆ ದಾಳಿ ಮಾಡಿ ಬಲಿ ತೆಗೆದುಕೊಂಡಿರುವ ಘಟನೆ  ತಾಲೂಕಿನ ಹೊಸಾಕುಳಿ ಹಾಗೂ ಕೊಂಡಕುಳಿ ಅರಣ್ಯದಲ್ಲಿ ನಡೆದಿದೆ.

ಸಾಲ್ಕೋಡದ ಸುನೀಲ ಆಚಾರಿ ಎಂಬವರಿಗೆ ಸೇರಿದ ಹಸುವನ್ನು ಕೊಂದಿರುವ ಚಿರತೆ ಹಸುವಿನ ದೇಹವನ್ನು ಎಳೆದೊಯ್ದು ತಲೆಭಾಗವನ್ನು ಮಾತ್ರ ಬಿಟ್ಟು ಹೋಗಿದೆ. ಹಸುವಿನ ಮಾಲಿಕ ಸುನೀಲ ಅವರು ಹಸುವನ್ನು ಅರಸಿ ಅರಣ್ಯ ಪ್ರದೇಶಕ್ಕೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಕೊಂಡಕುಳಿಯಲ್ಲಿಯೂ ಚಿರತೆ ಹಸುಗಳ ಮೇಲೆ ದಾಳಿ ನಡೆಸಿದ್ದು 10ಕ್ಕೂ ಹೆಚ್ಚು ಹಸುಗಳನ್ನು ಬಲಿ ಪಡೆದಿದೆ. ಹಸುಗಳ ಮೇಲೆ ದಾಳಿ ಮಾಡಿ ಹಸುವಿನ ಅರ್ಧ ದೇಹ ತಿಂದು ಹಾಕಿದೆ. 

ತಾಲೂಕಿನ ಸಾಲ್ಕೋಡ, ಹಳದೀಪುರ, ಅರೇಅಂಗಡಿ ಸೇರಿದಂತೆ ಹೊನ್ನಾವರ ತಾಲೂಕಿನ ಅನೇಕ ಕಡೆಗಳಲ್ಲಿ ಚಿರತೆ ತನ್ನ ಅಟ್ಟಹಾಸ ಮುಂದುವರಿಸಿದೆ.

ಕಳೆದ ಐದಾರು ತಿಂಗಳುಗಳಿಂದ ಈ ಭಾಗದಲ್ಲಿ ಚಿರತೆ ದಾಳಿ ನಡೆಸುತ್ತಿದೆ.

ಕ್ರಷಿ ಜಮೀನಿನಲ್ಲಿ ಚಿರತೆ ಹೆಜ್ಜೆ ಪತ್ತೆಯಾಗುತ್ತಿವೆ. ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ತೋಟಗಳಿಗೆ ಕೆಲಸಕ್ಕೆ ತೆರಳುವ ಕಾರ್ಮಿಕರು ಆತಂಕಗೊಂಡಿದ್ದಾರೆ. ತಕ್ಷಣ ಹುಲಿ ಹಿಡಿಯಲು ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net