ಶಾಸಕಿ ಬೆಂಬಲಿಗರಿಂದ ಬೆದರಿಕೆ

28-DVD-1 (Yankanagouda)
ವೆಂಕನಗೌಡ
Published on

ದೇವದುರ್ಗ: ಶಾಸಕಿ ಕರೆಮ್ಮ ಜಿ.ನಾಯಕ ವಿರುದ್ಧ ಮಾತನಾಡುವವರಿಗೆ ಅವರ ಬೆಂಬಲಿಗರು ಬೆದರಿಕೆ ಹಾಕುತ್ತಿದ್ದಾರೆ ಎಂದು ಬಿಎಸ್ಪಿ ಜಿಲ್ಲಾಧ್ಯಕ್ಷ ವೆಂಕನಗೌಡ ನಾಯಕ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು. ಕೆಕೆಆರ್‌ಡಿಬಿಯಿಂದ ತಾಲೂಕಿಗೆ ಬಿಡುಗಡೆಯಾದ ಅನುದಾನದಲ್ಲಿ ಬಹುತೇಕ ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ಗೆ ನೀಡಿದ್ದು, ಅವರಿಂದ ಶಾಸಕಿ ಹಾಗೂ ಅಧಿಕಾರಿಗಳು ಕಮಿಷನ್ ಫಿಕ್ಸ್ ಮಾಡಿದ್ದಾರೆ. ಈ ಬಗ್ಗೆ ನಾವು ಸುದ್ದಿಗೋಷ್ಠಿ ಮಾಡಿದಾಗ, ಶಾಸಕರ ಬೆಂಬಲಿಗರು ನಮಗೆ ಫೋನ್ ಮಾಡಿ ಬೆದರಿಕೆ ಹಾಕಿದ್ದಾರೆ.

ಭೀಮ್ ಆರ್ಮಿ ಸಂಘದ ತಾಲೂಕು ಅಧ್ಯಕ್ಷ ವಿಶ್ವನಾಥ ಬಲ್ಲಿದವ್ ಅವರಿಗೆ ಶಾಸಕಿ ಬೆಂಬಲಿಗ ಅಂಜು ನಾಯಕ ಎನ್ನುವವರು ಫೋನ್ ಮಾಡಿ ‘ಶಾಸಕಿ ವಿರುದ್ಧ ಮಾತನಾಡಿದರೆ ಸುಮ್ಮನಿರಲ್ಲ’ ಎಂದು ಬೆದರಿಕೆ ಹಾಕಿದ್ದಾನೆ. ಈ ಕುರಿತು ನಾವು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದೇವೆ ಎಂದರು.

ತಾಲೂಕಿನಲ್ಲಿ ಕಳೆದ 15 ವರ್ಷಗಳಿಂದ ಹಿಂದಿನ ಶಾಸಕರ ಆಡಳಿತ ಅವಧಿಯಲ್ಲಿ ಜರುಗಿದ ದೌರ್ಜನ್ಯ, ಭ್ರಷ್ಟಾಚಾರ, ಗೂಂಡಾ ವರ್ತನೆ ಖಂಡಿಸಿ ಮತದಾರರು ಬದಲಾವಣೆ ಬಯಸಿ ಕರೆಮ್ಮ ನಾಯಕಗೆ ಬೆಂಬಲಿಸಿದ್ದರು. ಇವರಿಂದ ಉತ್ತಮ ಆಡಳಿತದ ನಿರೀಕ್ಷೆಯಲ್ಲಿದ್ದರು. ಆದರೆ, ಶಾಸಕಿ ಕರೆಮ್ಮ ನಾಯಕ ಅದೇ ಚಾಳಿ ಮುಂದುವರಿಸಿದ್ದಾರೆ.

ಅವರ ವಿರುದ್ಧ ಮಾತನಾಡುವವರಿಗೆ ಬೆದರಿಕೆ ಹಾಕಲಾಗುತ್ತಿದೆ. ಶಾಸಕರು ಮತದಾರರು ಕೊಟ್ಟಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಜನಪರ ಕೆಲಸ ಮಾಡಬೇಕು. ಗೂಂಡಾವರ್ತನೆ ಮುಂದುವರಿದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಬಿಎಸ್ಪಿ ತಾಲೂಕು ಅಧ್ಯಕ್ಷ ಯೇಸು ಕಮಲದಿನ್ನಿ, ಪ್ರಮುಖರಾದ ವಿಶ್ವನಾಥ ಬಲ್ಲಿದವ್, ಮೋಹನ್ ಬಲ್ಲಿದವ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net