ಇಂದಿನಿಂದ ಲೆಜೆಂಡ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ

20mdk06
ಭಾರತ ತಂಡದ ಮಾಜಿ ಆಟಗಾರ ಜಾವಗಲ್ ಶ್ರೀನಾಥ್ ಅವರನ್ನು ಪಂದ್ಯಾವಳಿ ಉದ್ಘಾಟನೆಗೆ ಆಹ್ವಾನಿಸಲಾಯಿತು. ಲಕ್ಷ್ಮೀ ನಾರಾಯಣ್ (ನಾಣಿ), ಆದಂ, ಮಹದೇವ್ ಇದ್ದರು.
Published on

ಕುಶಾಲನಗರ: ಕುಶಾಲನಗರದ ಪ್ರತಿಷ್ಠಿತ ಲೆಜೆಂಡ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಶುಕ್ರವಾರ (ಫೆ.21) ಚಾಲನೆ ಸಿಗಲಿದೆ.

ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ನಡೆಯಲಿರುವ ಪಂದ್ಯಾವಳಿಯನ್ನು ಭಾರತ ತಂಡದ ಮಾಜಿ ಆಟಗಾರ, ವೇಗದ ಬೌಲರ್ ಜಾವಗಲ್ ಶ್ರೀನಾಥ್ ಉದ್ಘಾಟಿಸಲಿದ್ದಾರೆ. ಈಗಾಗಲೇ ಮೂರು ಆವೃತ್ತಿಗಳು ಯಶಸ್ವಿಯಾಗಿದ್ದು ನಾಲ್ಕನೆಯ ಆವೃತ್ತಿ ಪಂದ್ಯಗಳಿಗೆ ಕ್ರೀಡಾ ಪ್ರೇಮಿಗಳು ಕ್ರೀಡಾ ಪಟುಗಳು ಕಾತುರದಿಂದ ಕಾಯುತ್ತಿದ್ದಾರೆ.

ಶುಕ್ರವಾರ ಸಂಜೆ 4 ಗಂಟೆಗೆ ನಗರದ ಗಣಪತಿ ದೇವಾಲಯದ ಮುಂಭಾಗದಿಂದ ಮೆರವಣಿಗೆಯಲ್ಲಿ ಎಲ್ಲ ತಂಡದ ಆಟಗಾರರು, ಕ್ರೀಡಾ ಪ್ರೇಮಿಗಳು ಚಂಡೆವಾದ್ಯಗಳ ಮೂಲಕ ಮೈದಾನಕ್ಕೆ ತೆರಳುವ ಮುಖಾಂತರ ಕ್ರಿಕೆಟ್ ಹಬ್ಬಕ್ಕೆ ಚಾಲನೆ ಸಿಗಲಿದೆ. ಸಮಾಜ ಸೇವಕ ಲಕ್ಷ್ಮಿ ನಾರಾಯಣ್ (ನಾಣಿ) ಸಾರಥ್ಯದಲ್ಲಿ ನಡೆಯುವ ಹೊನಲು ಬೆಳಕಿನ ಈ ಪಂದ್ಯದಲ್ಲಿ ಒಟ್ಟು 13 ತಂಡಗಳ 195 ಆಟಗಾರರು ಪಾಲ್ಗೊಳ್ಳಲಿದ್ದಾರೆ.

6 ದಿನಗಳು ನಡೆಯಲಿರುವ ಟೂರ್ನಿಯಲ್ಲಿ 72 ಪಂದ್ಯಗಳು ನಡೆಯಲಿವೆ. ಪ್ರಥಮ ಬಹುಮಾನ 1.33 ಲಕ್ಷ ರೂ., ದ್ವಿತೀಯ ಬಹುಮಾನ 77 ಸಾವಿರ ರೂ., ತೃತೀಯ ಬಹುಮಾನ 30 ಸಾವಿರ ರೂ., ನಾಲ್ಕನೇ ಬಹುಮಾನ 10 ಸಾವಿರ ರೂ. ಜತೆ ಟ್ರೋಫಿ ಇರಲಿದೆ. ಪಂದ್ಯ ಪುರುಷೋತ್ತಮ ಆಟಗಾರನಿಗೆ ದ್ವಿಚಕ್ರ ವಾಹನ, ಅತ್ಯುತ್ತಮ ಬ್ಯಾಟ್ಸ್‌ಮನ್‌ಗೆ ಸೈಕಲ್, ಅತ್ಯುತ್ತಮ ಬೌಲರ್‌ಗೆ ಫ್ರಿಡ್ಜ್, ಬೆಸ್ಟ್ ಕ್ಯಾಚರ್‌ಗೆ ವಾಟರ್ ಪ್ಯೂರಿಫೈಯರ್, ಬೆಸ್ಟ್ ವಿಕೆಟ್ ಕೀಪರ್‌ಗೆ ಮೈಕ್ರೋ ಓವೆನ್, ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್‌ಗೆ ಮೊಬೈಲ್, ಬೆಸ್ಟ್ ಫೀಲ್ಡರ್ ಹಾಗೂ ಹೈಯೆಸ್ಟ್ ಸಿಕ್ಸರ್ ಬಾರಿಸಿದ ಆಟಗಾರರಿಗೆ ಸ್ಮಾರ್ಟ್‌ವಾಚ್ ಬಹುಮಾನ ನೀಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net