

ಅರಸೀಕೆರೆ ಗ್ರಾಮಾಂತರ: ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಅದೇ ರೀತಿ ಕಾನೂನಿನ ಬಗ್ಗೆ ತಿಳಿದುಕೊಂಡರೆ ಉತ್ತಮ ಜೀವನ ಮಾಡಬಹುದು ಎಂದು ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಕಿರಣ್ ಕುಮಾರ್ ಡಿ ವಡಿಗೇರಿ ಅಭಿಪ್ರಾಯಪಟ್ಟರು.
ಬಾಣಾವರ ಹೋಬಳಿಯ ಶಾನೆಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ ಗ್ರಾಮದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಪೌಷ್ಟಿಕ ಆಹಾರ ಸಪ್ತಾಹ ಮತ್ತು ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಪೌಷ್ಟಿಕತೆ ಎಂಬುದು ಕೇವಲ ಆಹಾರ ಒಂದರಿಂದ ಬರುವುದಿಲ್ಲ. ಬಾಲ್ಯವಿವಾಹದಿಂದಲೂ ಬರುವ ಸಾಧ್ಯತೆ ಇದೆ. 18 ವರ್ಷಕ್ಕಿಂತ ಮುಂಚೆಯೇ ಹೆಣ್ಣು ಮಕ್ಕಳನ್ನು ವಿವಾಹ ಮಾಡಿ ಕೊಡುವುದರಿಂದ ಅವರ ದೇಹವು ಬಲಿಷ್ಠವಾಗಿರುವುದಿಲ್ಲ ಮತ್ತು ವಿವಾಹವಾದ ನಂತರ ಜನಿಸುವ ಮಗು ಕೂಡ ಅಪೌಷ್ಟಿಕತೆಯಿಂದ ಜನಿಸುತ್ತದೆ. ಆದ್ದರಿಂದ 18 ವರ್ಷಗಳು ತುಂಬಿದ ಹೆಣ್ಣು ಮಗು ದೇಹ ಮತ್ತು ಮಾನಸಿಕವಾಗಿ ಬೆಳವಣಿಗೆ ಹೊಂದಿದ ನಂತರ ವಿವಾಹ ಮಾಡುವುದು ಒಳ್ಳೆಯದು. 18 ವರ್ಷಕ್ಕಿಂತ ಒಳಗಿನ ಹೆಣ್ಣು ಮಕ್ಕಳನ್ನು ವಿವಾಹ ಮಾಡುವುದು ಕಾನೂನಿನ ರೀತಿಯ ಅಪರಾಧ. ಇದಕ್ಕೆ ಪಾಲಕರು ಅಲ್ಲದೆ ವಿವಾಹವಾಗುವ ಗಂಡು ಮಕ್ಕಳು ಕೂಡ ಮತ್ತು ಅವರ ಕುಟುಂಬದವರು ಕೂಡ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಾನೆಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯರಾಮ್, ಮಾಜಿ ಉಪಾಧ್ಯಕ್ಷೆ ಮಮತಾ ಮಂಜುನಾಥ್, ವಕೀಲರ ಸಂಘದ ಅಧ್ಯಕ್ಷ ಸದಾನಂದ, ಕಾರ್ಯದರ್ಶಿ ಎಸ್ ಪ್ರಕಾಶ್, ನವೀನ್ ನಾಯಕ್, ಬಿ ಎಂ ಪ್ರಕಾಶ್, ಎಚ್.ಲಾವಣ್ಯಾ, ಸದಾಶಿವಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯೋಗೇಶ್, ಮೇಲ್ವಿಚಾರಕಿ ಭಾರತೀ, ನಿಜಲಿಂಗಪ್ಪ, ಶೇಖರಪ್ಪ, ಶ್ರೀನಿವಾಸ್, ವಿಶ್ವನಾಥ್, ಪೂರ್ಣಿಮಾ ಹೆಗಡೆ, ಗ್ರಾಮಸ್ಥರಾದ ಮಂಜುನಾಥ್, ಗುಡಿ ಗೌಡ್ರು ನಂಜುಂಡಪ್ಪ, ಮಹದೇವಪ್ಪ, ಶೈಲಜಾ ದಾನಕುಮಾರ್ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಇದ್ದರು.