

ಬೆಂಗಳೂರು: ಕಾನೂನು ವೃತ್ತಿಯಲ್ಲಿ ತೊಡಗುವವರು ಪ್ರಮುಖ ತೀರ್ಪುಗಳ ಕುರಿತು ಅಧ್ಯಯನ ನಡೆಸಬೇಕು ಎಂದು ಹೈಕೋರ್ಟ್ ಮಾಜಿ ಅಡ್ವೋಕೇಟ್ ಜನರಲ್ ಬಿ.ವಸುದೈವ ಆಚಾರ್ಯ ಹೇಳಿದ್ದಾರೆ.
ಸೌಂದರ್ಯ ಕಾನೂನು ಕಾಲೇಜು ನಗರದಲ್ಲಿ ಆಯೋಜಿಸಲಾಗಿದ್ದ ‘ಧೀಕ್ಷಾರಂಭ’ ಕಾರ್ಯಕ್ರಮದಲ್ಲಿ ಹಿರಿಯ ವಕೀಲರನ್ನು ಸನ್ಮಾನಿಸಿ ಮಾತನಾಡಿದರು.
ದೇಶದ ಸಂವಿಧಾನ ಮಹತ್ವ ಬಗ್ಗೆ ಪ್ರತಿಯೊಬ್ಬರಿಗೆ ಅರಿವು ಇರಬೇಕು. ಪ್ರಮುಖ ತೀರ್ಪುಗಳನ್ನು ಅಧ್ಯಯನ ಮಾಡುವ ಜತೆಗೆ ವಕೀಲ ವೃತ್ತಿಯಲ್ಲಿ ತೊಡಗುವವರು, ಮಾದರಿ ನಡಾವಳಿ ಸಂಹಿತೆಯನ್ನು ಪಾಲಿಸಬೇಕು. ಕಾನೂನು ವೃತ್ತಿಯಲ್ಲಿ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು.ವಿದ್ಯಾರ್ಥಿ ಸಮುದಾಯ ಶಿಕ್ಷಣದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಕೌಶಲ ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸೌಂದರ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸೌಂದರ್ಯ ಪಿ.ಮಂಜಪ್ಪ ಮಾತನಾಡಿ, ಕಾನೂನು ವೃತ್ತಿ ಅತ್ಯಂತ ಮಹತ್ವದ್ದಾಗಿದ್ದು. ಕಾನೂನು ಶಿಕ್ಷಣ ಪಡೆದು ನೊಂದ ಜನರಿಗೆ ನ್ಯಾಯ ಒದಗಿಸಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದರು. ಶಿಕ್ಷಣ ಸಂಸ್ಥೆ ಸಿಇಒ ಎಂ.ಕೀರ್ತನ್‌ಕುಮಾರ್,ಟ್ರಸ್ಟಿ ವರುಣ್‌ಕುಮಾರ್, ಕಾನೂನು ಕಾಲೇಜು ಪ್ರಾಂಶುಪಾಲ ಡಾ.ಬಿ.ಪಿ.ಮಹೇಶ್ ಮತ್ತಿತರರಿದ್ದರು.