ಕೋರ್ಸ್ ರದ್ದುಪಡಿಸದಿದ್ದರೆ ಕಾನೂನು ಕ್ರಮ: ಬೆಂಗಳೂರು ವಿಶ್ವವಿದ್ಯಾಲಯ ಎಚ್ಚರಿಕೆ

ugc april 29
Published on

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿರುವ ಕೆಲವು ಕಾಲೇಜು/ಸಂಸ್ಥೆಗಳು ಮೈಸೂರು ವಿವಿ ಸೇರಿ ಇತರೆ ವಿವಿಗಳ ಅನುಮತಿ/ಮಾನ್ಯತೆ ಪಡೆದು ಕೋರ್ಸ್‌ಗಳನ್ನು ನಡೆಸುತ್ತಿರುವುದು ಕಂಡುಬಂದಿದೆ. ಕೂಡಲೇ ಅಂತಹ ಕೋರ್ಸ್‌ಗಳನ್ನು ರದ್ದುಗೊಳಿಸದಿದ್ದರೆ, ಸಂಬಂಧಪಟ್ಟ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ.

ಯಾವುದೇ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿರುವ ಸಂಸ್ಥೆಗಳು/ಕಾಲೇಜುಗಳಿಗೆ ಬೇರೆ ವಿಶ್ವವಿದ್ಯಾಲಯಗಳು ಮಾನ್ಯತೆಯನ್ನು ನೀಡುವಂತಿಲ್ಲ ಎಂದು ವಿಶ್ವವಿದ್ಯಾಲಯಗಳ ವ್ಯಾಪ್ತಿಯ ಕುರಿತು ವಿಶ್ವವಿದ್ಯಾಲಯ ಧನಸಹಾಯ ಆಯೋಗವು (ಯುಜಿಸಿ) 2013ರ ಜೂ.27ರಂದು ಸ್ಪಷ್ಟವಾಗಿ ನಿರ್ದೇಶನ ನೀಡಿದೆ.

ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ-2000 ಪ್ರಕರಣ5ರ ಅಡಿಯಲ್ಲಿರುವ ನಿಯಮಗಳು ಕೂಡ ಇದೇ ಕಾನೂನನ್ನು ಹೇಳಿದೆ. ಆದ್ದರಿಂದ ಈ ನಿಯಮಗಳನ್ನು ಮೀರಿ ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಕೆಲವು ಕಾಲೇಜು/ಸಂಸ್ಥೆಗಳು ಪಿಎಚ್.ಡಿ, ಸಂಶೋಧನೆ, ಎಂ.ಬಿ.ಎ ಹಾಗೂ ಇತರೆ ಕೋರ್ಸ್‌ಗಳನ್ನು ಮೈಸೂರು ವಿಶ್ವವಿದ್ಯಾಲಯ ಸೇರಿ ಇತರೆ ವಿಶ್ವವಿದ್ಯಾಲಯಗಳಿಂದ ಅನುಮತಿ/ಮಾನ್ಯತೆಯನ್ನು ಪಡೆದು ನಡೆಸುತ್ತಿವೆ.

ಇದರಿಂದ ಯುಜಿಸಿ, ಕರ್ನಾಟಕ ವಿಶ್ವವಿದ್ಯಾಲಯ ಅಧಿನಿಯಮ-2000 ಹಾಗೂ ಸರ್ವೋಚ್ಚ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಲಾಗಿದೆ. ಇಂತಹ ಕಾಲೇಜುಗಳಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಮಾನ್ಯತೆ ಕೂಡ ಇರುವುದಿಲ್ಲ. ಆದ್ದರಿಂದ ಇಂತಹ ಕಾಲೇಜುಗಳಿಗೆ ಪ್ರವೇಶ ಪಡೆಯದಂತೆ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಿಗೆ ಸೂಚಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಬೆಂ.ವಿವಿ ವ್ಯಾಪ್ತಿಯಲ್ಲಿರುವ ಇಂತಹ ಸಂಸ್ಥೆಗಳು ಕೂಡಲೇ ಕೋರ್ಸ್‌ಗಳನ್ನು ರದ್ದುಪಡಿಸಬೇಕು. ತಪ್ಪಿದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net