

ಪುತ್ತೂರು: ವಿವೇಕಾನಂದರು ಒಬ್ಬ ಉತ್ತಮ ಕವಿ, ವಿಜ್ಞಾನಿ, ಹಾಗೂ ಸಂತರಾಗಿ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸಿದವರು. ಅಂದು ನರೇಂದ್ರನಾಗಿ ಉಳಿದವರು ವಿವೇಕಾನಂದರಾಗಲು ಅವರೊಳಗಿದ್ದ ಕಾವ್ಯಾಸಕ್ತಿ ಪ್ರಮುಖ ಕಾರಣವಾಗಿತ್ತು. ಕಾವ್ಯವೂ ಅವರ ಪ್ರಮುಖ ಆಸಕ್ತಿಗಳಲ್ಲೊಂದಾಗಿತ್ತು. ಅವರು ತಮ್ಮ ಕವಿತೆಗಳಿಂದ ಅನೇಕ ಕವಿಗಳಿಗೆ ಪ್ರೇರಣೆ ನೀಡಿದ್ದರು. ಸಾಹಿತ್ಯ ಲೋಕದಲ್ಲಿ ಹೊಸ ಮಜಲುಗಳನ್ನು ತೆರೆದಿದ್ದರು. ಅವರ ಕವಿತೆಗಳು ಯುವಜನತೆಗೆ ಮಾರ್ಗದರ್ಶನವೂ ಹೌದು ಎಂದು ಮಂಗಳೂರು ವಿವಿ, ಮಂಗಳ ಗಂಗೋತ್ರಿ, ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಹೇಳಿದರು.
ವಿವೇಕಾನಂದ ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ವಿವೇಕಾನಂದ ಸ್ನಾತ್ತಕೋತ್ತರ ಅಧ್ಯಯನ ಕೇಂದ್ರ, ವಿವೇಕಾನಂದ ಸಂಶೋಧನಾ ಕೇಂದ್ರ ಮತ್ತು ಐಕ್ಯೂಎಸಿಯ ಸಹಯೋಗದಲ್ಲಿ ಸ್ನಾತ್ತಕೋತ್ತರ ಅಧ್ಯಯನ ಕೇಂದ್ರದ ದಶಮಾನದ ಆಚರಣೆ ಸವಿನೆನಪಿಗಾಗಿ ರಾಷ್ಟ್ರ ಸಂತ ಸ್ವಾಮಿ ವಿವೇಕಾನಂದರ ಕುರಿತಾದ ಚಿಂತನೆಗಳ ಉಪನ್ಯಾಸ ಮಾಲಿಕೆ ವಿವೇಕ ಸ್ಮೃತಿಯಲ್ಲಿ ಸ್ವಾಮಿ ವಿವೇಕಾನಂದರ ಕಾವ್ಯಾಸಕ್ತಿ ಎಂಬ ವಿಷಯದ ಕುರಿತು ಮಾತನಾಡಿದರು.
ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ.ಎನ್.ಅಧ್ಯಕ್ಷತೆ ವಹಿಸಿದ್ದರು. ಸ್ನಾತ್ತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎಚ್.ಜಿ. ಶ್ರೀಧರ್ ಸ್ವಾಗತಿಸಿ, ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲಾ ಅಧ್ಯಯನ ಕೇಂದ್ರದ ಸಂಯೋಜಕಿ ಡಾ.ವಿದ್ಯಾ ಎಸ್.ವಂದಿಸಿದರು. ಸ್ನಾತ್ತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿ ರಜತ್ ನಿರೂಪಿಸಿದರು.
ವಿವೇಕಾನಂದರು ನಡೆದು ಬಂದ ಹಾದಿ ಎಲ್ಲರಿಗೂ ಆದರ್ಶ. ಅವರು ಆಡಿದ ಮಾತುಗಳು, ವಿಚಾರಗಳು ವಿವಿಧ ಆಯಾಮದಲ್ಲಿ ನಮ್ಮ ಮನಸ್ಸಲ್ಲೂ ಪ್ರಶ್ನೆಗಳು ಮೂಡುವಂತೆ ಮಾಡುತ್ತದೆ, ಅದರೆ ನಮ್ಮ ಪ್ರಶ್ನೆಗಳಿಗೆ ಉತ್ತರವಿಲ್ಲ. ಆದರೆ ಅವರು ಅವರೊಳಗೆ ಮೂಡಿದ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದರು. ಈ ಕಾಲಘಟ್ಟದಲ್ಲಿ ನಾವು ವಿವೇಕಾನಂದರ ಕುರಿತಾದ ಪುಸ್ತಕಗಳನ್ನು ಓದುವಾಗ ನಮ್ಮೊಳಗಿನ ಹಲವಾರು ಸಮಸ್ಯೆಗಳಿಗೆ ಪರಿಹಾರ ಲಭಿಸುತ್ತದೆ ಹಾಗೂ ವಿವೇಕಾನಂದರ ಚಿಂತನೆಗಳು ಯುವಪೀಳಿಗೆಗೆ ಮಾರ್ಗದರ್ಶನವಾಗುವುದು ಖಂಡಿತ. ಮಾನಸಿಕವಾಗಿ ದೈಹಿಕವಾಗಿ ಮುಂದಿನ ದಿನಗಳನ್ನು ಎದುರಿಸುವ ಧೈರ್ಯ ಎಲ್ಲರಲ್ಲೂ ಮೂಡಲಿ. - ಮುರಳಿಕೃಷ್ಣ ಕೆ.ಎನ್., ಸಂಚಾಲಕ, ಕಾಲೇಜಿನ ಆಡಳಿತ ಮಂಡಳಿ