

* ಬನ್ನಿಕುಪ್ಪೆ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ಶಿಕ್ಷಕ ಚಿಕ್ಕವೀರಯ್ಯ ಕಾರ್ಯಕ್ಕೆ ಮೆಚ್ಚುಗೆ
* ಸಾಮಾಜಿಕ ಜಾಲತಾಣದಲ್ಲಿ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆ
ರಾಮನಗರ
ಶಾಲಾ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಗೀಳು ಬಿಡಿಸಲು ತಾಲೂಕಿನ ಬನ್ನಿಕುಪ್ಪೆ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ಶಿಕ್ಷಕ ಚಿಕ್ಕವೀರಯ್ಯ ಟಿ.ಎನ್. ಆರಂಭಿಸಿರುವ ಮೊಬೈಲ್ ಬಿಡಿ, ಪುಸ್ತಕ ಹಿಡಿ ಅಭಿಯಾನಕ್ಕೆ ರಾಜ್ಯಾದ್ಯಂತ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಮೂರೇ ದಿನದಲ್ಲಿ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ವಿದ್ಯಾರ್ಥಿಗಳ ಜತೆಗೆ ಪಾಲಕರನ್ನೂ ಒಳಗೊಂಡಿರುವ ಅಭಿಯಾನವು ಕ್ಲಸ್ಟರ್ ವ್ಯಾಪ್ತಿಯ 14 ಶಾಲೆಗಳಲ್ಲಿ ನಡೆಯುತ್ತಿದೆ.
ವಾರಕ್ಕೊಮ್ಮೆ ನಡೆಯುವ ಅಭಿಯಾನವು ವಿದ್ಯಾರ್ಥಿಗಳಲ್ಲಿ ಮೊಬೈಲ್ ಬಳಕೆಯನ್ನು ತಗ್ಗಿಸಿ, ಪುಸ್ತಕದತ್ತ ಆಸಕ್ತಿ ಹೊರಳಿಸಿದೆ. ಮಕ್ಕಳಿಗೆ ಮೊಬೈಲ್ ನೀಡದೆ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪಾಲಕರಲ್ಲಿ ಜಾಗೃತಿ ಮೂಡಿಸುವಲ್ಲಿ ಅಭಿಯಾನ ಯಶಸ್ವಿಯಾಗಿದೆ. ಚಿಕ್ಕವೀರಯ್ಯ ನಡೆಸುತ್ತಿರುವ ಈ ಅಭಿಯಾನದ 1.32 ನಿಮಿಷ ವಿಡಿಯೋ ತುಣುಕು ಕ್ರಿಯೇಟಿವ್ ಮೈಂಡ್ಸ್ ಎಂಬ ಫೇಸ್‌ಬುಕ್ ಪುಟದಲ್ಲಿ ಹಂಚಿಕೆಯಾಗಿದ್ದು, ಕೆಲವೇ ದಿನಗಳಲ್ಲಿ 1.1 ಮಿಲಿಯನ್ ವೀಕ್ಷಣೆ ಕಂಡಿದೆ. 25 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ಇಷ್ಟಪಟ್ಟಿದ್ದಾರೆ.
ಕಲಿಕೆ ಮತ್ತು ಬರಹದಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯು ಮೂಲ ಸಾಕ್ಷರತೆ ಹಾಗೂ ಸಂಖ್ಯಾಜ್ಞಾನದ (ಎಫ್‌ಎಲ್‌ಎನ್) ಚಟುವಟಿಕೆಗಳ ಬಲವರ್ಧನೆಗೆ ಕಲಿಕಾ ಹಬ್ಬ ಕಾರ್ಯಕ್ರಮದಡಿ, ವಿಶೇಷ ತರಗತಿ ಆರಂಭಿಸಿದೆ. ಶಾಲೆಯಲ್ಲಿ ಮಕ್ಕಳ ಪಾಲಕರ ಸಭೆ ನಡೆಸಿದಾಗ, ಮೊಬೈಲ್ ಕಾರಣಕ್ಕೆ ತಮ್ಮ ಮಕ್ಕಳು ಪುಸ್ತಕ ಹಿಡಿಯುತ್ತಿಲ್ಲ ಎಂಬ ಅಸಹಾಯಕತೆಯನ್ನು ಬಹುತೇಕ ಪಾಲಕರು ತೋಡಿಕೊಂಡಿದ್ದರು.
ಕಲಿಕಾ ಹಬ್ಬ ಕಾರ್ಯಕ್ರಮದ ಪರಿಣಾಮಕಾರಿ ಜಾರಿ ಜತೆಗೆ, ಮಕ್ಕಳಲ್ಲಿ ಮೊಬೈಲ್ ಬಳಕೆ ತಗ್ಗಿಸಲು ಪೂರಕವಾಗಿ ಮೊಬೈಲ್ ಬಿಡಿ, ಪುಸ್ತಕ ಹಿಡಿ ಅಭಿಯಾನವನ್ನು ಕ್ಲಸ್ಟರ್‌ನ ಶಿಕ್ಷಕರ ಜತೆಗೂಡಿ ರೂಪಿಸಲಾಯಿತು ಎನ್ನುತ್ತಾರೆ ಚಿಕ್ಕವೀರಯ್ಯ. ಪ್ರತಿ ಶನಿವಾರ ಶಾಲಾವಧಿ ಮುಗಿಯುತ್ತಿದ್ದಂತೆ ಮಧ್ಯಾಹ್ನ 12ರಿಂದ 1 ಗಂಟೆವರೆಗೆ ಶಾಲೆಯ ಗ್ರಂಥಾಲಯದಲ್ಲಿ ಒಂದು ತಾಸು ಅಭಿಯಾನ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳುವಂತೆ ಪಾಲಕರಿಗೂ ತಿಳಿಸುತ್ತೇವೆ. ಹಲವರು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ ಎಂದು ಹೇಳಿದರು.
ವಿದ್ಯಾರ್ಥಿಗಳು ತಮಗಿಷ್ಟವಾದ ಪುಸ್ತಕವನ್ನು ಒಂದು ತಾಸು ಓದಿ ಕಡೆಗೆ ಆ ಕುರಿತು ತಮಗೆ ಅರ್ಥವಾಗಿದ್ದನ್ನು ಹಂಚಿಕೊಳ್ಳುತ್ತಾರೆ. ಪ್ರತಿ ಶಾಲೆಯಲ್ಲಿ ಇದನ್ನು ತಪ್ಪದೆ ಮಾಡಲಾಗುತ್ತಿದೆ. ಇದರಿಂದಾಗಿ, ಮಕ್ಕಳಲ್ಲಿ ಪುಸ್ತಕದ ಮೇಲಿನ ಆಸಕ್ತಿ ಹೆಚ್ಚಾಗಿ, ಮೊಬೈಲ್ ಆಕರ್ಷಣೆ ಕಡಿಮೆಯಾಗುತ್ತಿದೆ. ಅಭಿಯಾನದ ವಿಡಿಯೋ ತುಣಕನ್ನು ಶಾಲಾ ಮಕ್ಕಳ ಪಾಲಕರ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಹಂಚಿಕೊಳ್ಳುತ್ತೇವೆ. ಅಂತಹ ವಿಡಿಯೋವನ್ನು ಕ್ರಿಯೇಟಿವ್ ಮೈಂಡ್ಸ್ ತಂಡ ತನ್ನ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡ ಬಳಿಕ, ಅಭಿಯಾನಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಮೆಚ್ಚುಗೆ ಹರಿದು ಬರುತ್ತಿದೆ ಎಂದು ತಿಳಿಸಿದರು.
ವಿಡಿಯೊ ವೀಕ್ಷಿಸಿದ ರಾಜ್ಯದ ವಿವಿಧ ಭಾಗಗಳ ಶಿಕ್ಷಕರು, ವೈದ್ಯರು, ವಕೀಲರು, ಪಾಲಕರು ಸೇರಿ ವಿವಿಧ ಕ್ಷೇತ್ರಗಳ ಜನರು ಅಭಿಯಾನವನ್ನು ಶ್ಲಾಘಿಸಿದ್ದಾರೆ. ಸ್ವಾಮೀಜಿಯೊಬ್ಬರು ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಲವು ಶಿಕ್ಷಕರು ತಮ್ಮ ಶಾಲೆಯಲ್ಲೂ ಅಭಿಯಾನ ಆರಂಭಿಸುವ ಇರಾದೆ ವ್ಯಕ್ತಪಡಿಸಿದ್ದಾರೆ ಎಂದು ಚಿಕ್ಕವೀರಯ್ಯ ಸಂತಸ ಹಂಚಿಕೊಂಡರು.
ಮೊಬೈಲ್ ಅತಿಯಾದ ಬಳಕೆ ಮಕ್ಕಳಲ್ಲಿನ ಸೃಜನಶೀಲತೆಗೆ ದೊಡ್ಡ ಅಡ್ಡಿಯಾಗಿದೆ. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿನ ಆಸಕ್ತಿಯನ್ನು ಕಡಿಮೆ ಮಾಡುತ್ತಿದೆ. ಪಾಲಕರ ಮೊಬೈಲ್ ಹಿಡಿದು ರೀಲ್ಸ್, ಯೂಟ್ಯೂಬ್, ಗೇಮ್, ಸಿನಿಮಾಗಳಲ್ಲಿ ಮಕ್ಕಳು ಮುಳುಗುತ್ತಿದ್ದಾರೆ. ಇದರಿಂದಾಗಿ ಮಕ್ಕಳಲ್ಲಿ ದೃಷ್ಟಿ ದೋಷವು ಹೆಚ್ಚಾಗುವ ಜತೆಗೆ, ಮೊಬೈಲ್‌ನಲ್ಲಿ ಅವರನ್ನು ಹೊರತರಲಾಗದಂತೆ ಆಗಿದೆ. ಪಠ್ಯೇತರ ಚಟುವಟಿಕೆ ಅಭಿರುಚಿ ಬೆಳಸುವುದರಿಂದ ಮೊಬೈಲ್‌ನಿಂದ ವಿಮುಖರನ್ನಾಗಿ ಮಾಡಬಹುದು. ಈ ಕಾರಣಕ್ಕಾಗಿಯೇ ಮೊಬೈಲ್ ಬಿಡಿ ಪುಸ್ತಕ ಬಿಡಿ ಅಭಿಯಾನ ಆರಂಭಿಸಲಾಗಿದೆ. ಚಿಕ್ಕವೀರಯ್ಯ, ಶಿಕ್ಷಕ