ಹರಪನಹಳ್ಳಿ: ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಕಾಶ ಪಾಟೀಲ್ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ರೈತ ಮಿತ್ರ ಸಂಘದಿಂದ ಸೋಮವಾರ ತಹಸೀಲ್ದಾರ್ ಬಿ.ವಿ.ಗಿರೀಶ ಬಾಬುಗೆ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ: 1,519 ಕಾರ್ಡ್ಗಳ ಅಮಾನತು
ಕರ್ನಾಟಕ ರೈತ ಮಿತ್ರ ಸಂಘದ ಅಧ್ಯಕ್ಷ ಎಚ್.ವೆಂಕಟೇಶ ಮಾತನಾಡಿ, ಸತ್ತೂರು ಕೆರೆ ಬಳಿ ನಿರ್ಮಿಸಿರುವ ಸಿಸಿ ರಸ್ತೆ ಸಂಪೂರ್ಣ ಕಳಪೆಯಾಗಿದ್ದರಿಂದ ಅಪಘಾತಗಳು ನಡೆಯುತ್ತಿವೆ. ಇದಕ್ಕೆಲ್ಲ ಲೋಕೋಪಯೋಗಿ ಇಲಾಖೆ ಹಾಗೂ ಗುತ್ತಿಗೆದಾರರ ಬೇಜವಾಬ್ದಾರಿ ಕಾರಣ.
ಕಳೆದ ವಾರ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಳಪೆ ಕಾಮಗಾರಿಯಿಂದ ರಸ್ತೆ ಹದಗೆಟ್ಟಿದ್ದು ಇದಕ್ಕೆ ಕಾರಣರಾದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಕಾಶ ಪಾಟೀಲ್ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಬೇಕು.
ಸದರಿ ಕಾಮಗಾರಿಯ ಗುತ್ತಿಗೆದಾರರ ಪರವಾನಗಿಯನ್ನು ಬ್ಲಾಕ್‌ಲಿಸ್ಟ್‌ಗೆ ಸೇರಿಸಬೇಕು. ಮೃತ ಮಹಿಳೆಯ ಕುಟುಂಬಕ್ಕೆ ಹಾಗೂ ತೀವ್ರ ಗಾಯಕ್ಕೆ ಒಳಗಾದವರಿಗೆ ಗುತ್ತಿಗೆದಾರರು ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ವಂತ ಖರ್ಚಿನಲ್ಲಿ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.