1,519 ಕಾರ್ಡ್‌ಗಳ ಅಮಾನತು

28 KDL 01
ಕೂಡ್ಲಿಗಿ ತಾಲೂಕಿನ ವಿವಿಧ ಗ್ರಾಮಗಳ ಪಡಿತರ ಲಾನುಭವಿಗಳು ಗ್ರೇಡ್-2 ತಹಸೀಲ್ದಾರ್ ಎಂ.ವಿ. ನೇತ್ರಾವತಿ ಅವರಿಗೆ ಮನವಿ ಸಲ್ಲಿಸಿದರು. ಆಹಾರ ಸರಬರಾಜು ಇಲಾಖೆಯ ಶಿರೆಸ್ತೇದಾರ್ ಅಜಿತ್ ಕುಮಾರ್ ಇತರರಿದ್ದರು.
Published on

ಕೂಡ್ಲಿಗಿ: ಪಡಿತರ ಕಾರ್ಡ್‌ಗಳು ರದ್ದಾದ ವಿಷಯ ತಿಳಿದ ನೂರಾರು ಫಲಾನುಭವಿಗಳು ಸೋಮವಾರ ತಾಲೂಕು ಕಚೇರಿಗೆ ಆಗಮಿಸಿ ಆಹಾರ ಸರಬರಾಜು ಇಲಾಖೆ ಅಧಿಕಾರಿಗಳ ವಿರುದ್ಧ ಸೋಮವಾರ ಆಕ್ರೋಶ ವ್ಯಕ್ತಪಡಿಸಿದರು.

ವಿವಿಧ ಕಾರಣಗಳಿಂದ ತಾಲೂಕಿನಲ್ಲಿ 1,519 ಕಾರ್ಡ್‌ಗಳನ್ನು ಅಮಾನತು ಮಾಡಲಾಗಿದೆ. ಅಕ್ಟೋಬರ್ ಪಡಿತರ ಪಡೆಯಲು ವಿತರಕರ ಬಳಿ ಹೋದಾಗ ನಿಮ್ಮ ಕಾರ್ಡ್ ರದ್ದಾಗಿದೆ. ಅದ್ದರಿಂದ ನಿಮಗೆ ಅಕ್ಕಿ ಬಂದಿಲ್ಲ ಎಂದು ತಿಳಿಸಿದ್ದಾರೆ. ತಾಲೂಕು ಆಡಳಿತ ಭವನದಲ್ಲಿನ ಆಹಾರ ಸರಬರಾಜು ಇಲಾಖೆಯ ಕಚೇರಿ ಮುಂದೆ ಸೋಮವಾರ ಜಮಾಯಿಸಿದ ನೂರಾರು ಜನರು ಲಾನುಭವಿಗಳು ತಮ್ಮ ಕಾರ್ಡ್ ಹೇಗೆ ಮತ್ತು ಏಕೆ ರದ್ದು ಮಾಡಲಾಗಿದೆ ಎಂಬ ಮಾಹಿತಿ ನೀಡಿ ಎಂದು ಅಧಿಕಾರಿಗಳನ್ನು ಆಗ್ರಹಿಸಿದರು.

ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ನಮ್ಮನ್ನು ಹೊರಗಿಡಲು ಈ ರೀತಿ ಕಾರ್ಡ್ ರದ್ದು ಮಾಡಲಾಗಿದೆ. ನನಗೆ ಯಾವುದೇ ಹೊಲ ಇಲ್ಲ. ಆದಾಯವು ಇಲ್ಲ ಏಕೆ ರದ್ದಾಯಿತು. ಬಡವರಾದ ನಾವು ಹೇಗೆ ಬದುಕ ಬೇಕು ಎಂದು ಫಲಾನುಭವಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿ, ತಕ್ಷಣ ತಮಗೆ ಪಡಿತರ ನೀಡುವಂತೆ ಒತ್ತಾಯಿಸಿದರು.

ಅಹವಾಲು ಸ್ವೀಕರಿಸಿದ ಗ್ರೇಡ್-2 ತಹಸೀಲ್ದಾರ್ ಎಂ.ವಿ. ನೇತ್ರಾವತಿ ಮಾತನಾಡಿ, ತಾಲೂಕಿನಲ್ಲಿ ಯಾವ ಪಡಿತರ ಚೀಟಿಯನ್ನು ರದ್ದು ಮಾಡಿಲ್ಲ. ಆದರೆ ಅಮಾನತು ಮಾಡಲಾಗಿದೆ. ಅಮಾನತಾದ ಕಾರ್ಡ್‌ಗಳನ್ನು ಪುನರ್ ಪರಿಶೀಲಿಸಿ, ಅರ್ಹ ಫಲಾನುಭವಿಗಳ ಕಾರ್ಡ್‌ಗಳನ್ನು ಚಾಲನೆ ಮಾಡಲು ಕ್ರಮ ಕೈಗೊಳ್ಳುವಂತೆ ಆಹಾರ ಇಲಾಖೆಯ ಉಪ ನಿರ್ದೇಶಕರು ಸೂಚನೆ ನೀಡಿದ್ದಾರೆ. ಆದರೆ ತಕ್ಷಣಕ್ಕೆ ಅಕ್ಕಿ ನೀಡುವಂತಹ ನಿಮ್ಮ ಬೇಡಿಕೆ ಬಗ್ಗೆ ಜಿಲ್ಲಾಧಿಕಾರಿ ಹಾಗೂ ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಿಗೆ ಪತ್ರ ಬರೆಯಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net