

ಸೋಮವಾರಪೇಟೆ: ತಂತ್ರಜ್ಞಾನದ ಜಗತ್ತಿನಲ್ಲಿ ಅಸ್ತಿತ್ವ ಉಳಿಸಿಕೊಂಡು ಬೆಳೆಯಬೇಕಾದಲ್ಲಿ ತಾಂತ್ರಿಕತೆಯ ಪರಿಣತಿ ಮತ್ತು ಕೌಶಲಗಳ ಕಲಿಕೆ ಅನಿವಾರ್ಯ ಎಂದು ಬೆಂಗಳೂರು ಮೂಲದ ಟ್ರಯೊ ವಿದ್ಯಾಕೇಂದ್ರ ಸಂಸ್ಥೆಯ ತರಬೇತುದಾರ ಗಗನ್ ತಿಳಿಸಿದರು.
ಯಡೂರು ಗ್ರಾಮದ ಬಿ.ಟಿ.ಸಿ.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐ.ಕ್ಯು.ಎ.ಸಿ. ಮತ್ತು ಉದ್ಯೋಗ ಮಾಹಿತಿ ಘಟಕದ ವತಿಯಿಂದ ಪಂಡಿತ್ ದೀನ ದಯಾಳ್ ಕೌಶಲಾಭಿವೃದ್ಧಿ ಯೋಜನೆಯಡಿ ಇತ್ತೀಚೆಗೆ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜ್ಞಾನ ಎಂದರೆ ಈ ಹಿಂದೆ ಪುಸ್ತಕಗಳನ್ನು ಓದಿ ನೆನಪಿಟ್ಟುಕೊಂಡು ಸಂದರ್ಭ ಬಂದಾಗ ಎಲ್ಲರೊಂದಿಗೆ ಹಂಚಿಕೊಳ್ಳುವುದಾಗಿತ್ತು. ಆದರೆ, ಈಗಿನ ಜಗತ್ತಿನಲ್ಲಿ ಮಾಹಿತಿ ಕ್ರೋಡೀಕರಣ, ತಂತ್ರಜ್ಞಾನವನ್ನು ಬಳಸುವ ಬುದ್ಧಿವಂತಿಕೆ ಮತ್ತು ಕೌಶಲಗಳ ಪರಿಣತಿಯೇ ಜ್ಞಾನ ಎಂಬಂತಾಗಿದೆ. ಉದ್ಯೋಗ ಒದಗಿಸಿಕೊಡದ ಶಿಕ್ಷಣಕ್ಕೆ ಬೆಲೆಯಿಲ್ಲದಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಉದ್ಯೋಗಾಧಾರಿತ ಶಿಕ್ಷಣದ ಕಡೆ ಗಮನಹರಿಸಬೇಕು. ಸರ್ಕಾರದ ವಿವಿಧ ಯೋಜನೆಗಳಡಿ ದೊರೆಯುವ ತರಬೇತಿ ಕಾರ್ಯಕ್ರಮಗಳು, ಕೌಶಲಾಭಿವೃದ್ಧಿ ಆಧರಿತ ಕಾರ್ಯಕ್ರಮಗಳ ಸದ್ಬಳಕೆ ಮಾಡಿಕೊಂಡು ಮುಂದೆ ಬರಬೇಕು ಎಂದು ತಿಳಿಸಿದರು.
ಪ್ರಾಂಶುಪಾಲೆ ಪ್ರೊ.ಕೆ.ಎಚ್. ಧನಲಕ್ಷ್ಮೀ, ಐ.ಕ್ಯು.ಎ.ಸಿ. ಸಂಚಾಲಕ ಎಂ.ಎಸ್.ಶಿವಮೂರ್ತಿ, ಪ್ರಾಧ್ಯಾಪಕರಾದ ಡಾ. ಕೆ.ಎನ್.ಕುಸುಮಾ, ಎಂ.ಎಂ. ಸುನೀತಾ ಇದ್ದರು.