ಕಲಿಕಾ ಹಬ್ಬ ಶೈಕ್ಷಣಿಕ ಪ್ರಗತಿಗೆ ಪೂರಕ

HUN-FEB-12-2(DEVAGALLI SCHOOL PROGRAMME)
ಹುಣಸೂರು ತಾಲೂಕು ದೇವಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಬಿಇಒ ಎಸ್.ಪಿ.ಮಹದೇವ್ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಿ ಪ್ರೋತ್ಸಾಹಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಮಂಜು, ಸದಸ್ಯರಾದ ರೇಣುಕಾ, ನಾಗರಾಜೇ ಅರಸ್, ಪಳನಿಸ್ವಾಮಿ, ಮುಖ್ಯಶಿಕ್ಷಕಿ ಶಶಿಕಲಾ ಇತರರಿದ್ದರು.
Published on

ಹುಣಸೂರು: ತಾಲೂಕಿನ ಸಿಂಗರಮಾರನಹಳ್ಳಿ ಕ್ಲಸ್ಟರ್ ವ್ಯಾಪ್ತಿಯ ಕಲಿಕಾ ಹಬ್ವವನ್ನು ದೇವಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಸಂಭ್ರಮದಿಂದ ಆಚರಿಸಿದರು.

ಕಲಿಕಾ ಹಬ್ಬದಲ್ಲಿ ಮಕ್ಕಳು ಕಥೆ ಕಟ್ಟಿದರು. ಕಟ್ಟಿದ ಕಥೆಯನ್ನು ಹೇಳಿದರು. ರಸಪ್ರಶ್ನೆಯಲ್ಲಿ ಉತ್ಸಾಹದಿಂದ ಭಾಗವಹಿಸಿದರು. ನೆನಪಿನ ಶಕ್ತಿ ಪರೀಕ್ಷೆಯಲ್ಲೂ ಪಾಸಾದರು. ಗಟ್ಟಿಯಾಗಿ ಓದುವ ಸ್ಪರ್ಧೆ, ಕ್ಯಾಲಿಗ್ರಫಿ ಅಂದರೆ ಅಂದ ಚೆಂದದ ಬರಹ ಸ್ಪರ್ಧೆಯಲ್ಲಿ ಭಾಗವಹಿಸಿ ಸೈ ಎನಿಸಿಕೊಂಡರು. ಹೀಗೆ ಕಲಿಕಾ ಹಬ್ಬದ ಎಲ್ಲ ಏಳು ವಿಭಾಗಗಳಲ್ಲೂ ಕ್ಲಸ್ಟರ್ ವ್ಯಾಪ್ತಿಯ 13 ಶಾಲೆಗಳ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಸಂಭ್ರಮಿಸಿದರು.

ಬುಧವಾರ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ್, ಕಲಿಕಾ ಹಬ್ಬದ ಮೂಲಕ ವಿದ್ಯಾರ್ಥಿಗಳಲ್ಲಿ ಅಡಗಿದ್ದ ಸುಪ್ತ ಪ್ರತಿಭೆ ಹೊರಬರಲಿದೆ. ಪ್ರತಿಭಾ ಕಾರಂಜಿ ಒಂದು ರೀತಿಯಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ವೇದಿಕೆಯಾದರೆ, ಕಲಿಕಾ ಹಬ್ಬ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿದೆ. ನಾಲ್ಕು ಕೋಣೆಗಳಲ್ಲಿ ಹೇಳಿಕೊಡುವ ಪಾಠಕ್ಕಿಂತ ಇಂತಹ ಪ್ರಾಯೋಗಿಕ ಪಾಠಗಳೇ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ನಿಲ್ಲಲು ಸಾಧ್ಯ. ಇದಲ್ಲದೇ ಕಲಿಕಾ ಹಬ್ಬದಲ್ಲಿರುವ ಪಾಲಕರೊಂದಿಗಿನ ಸಂಬಂಧ ಆಟಗಳೂ ಕೂಡ ಮಕ್ಕಳ ಮನಸ್ಸಿನ ಮೇಲೆ ಸುಮಧುರ ಪರಿಣಾಮ ಬೀರಲಿದೆ. ವಿದ್ಯಾರ್ಥಿಗಳು ಇಂತಹ ಚಟುವಟಿಕೆಯಲ್ಲಿ ತಪ್ಪದೇ ಭಾಗವಹಿಸಬೇಕೆಂದು ಸಲಹೆ ನೀಡಿದರು.

ಡಯಟ್‌ನ ಹಿರಿಯ ಉಪನ್ಯಾಸಕ ಸುರೇಶ್ ಮಾತನಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಹೇಮಲತಾ, ಇಸಿಒ ರುದ್ರಪ್ಪ, ಕೇಶವಮೂರ್ತಿ, ಕುಮಾರಸ್ವಾಮಿ, ಬಿಆರ್‌ಪಿ ಆನಂದ್, ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಶಿಕುಮಾರ್, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಮಾರುತಿ, ಗ್ರಾಮಸ್ಥರಾದ ನಾಗರಾಜೇ ಅರಸ್, ಎಸ್‌ಡಿಎಂಸಿ ಅಧ್ಯಕ್ಷ ಮಂಜು, ಸದಸ್ಯರಾದ ರೇಣುಕಾ, ಶಾಂತಾ, ಷಣ್ಮುಗ , ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ ದೇವರಾಜು, ಪಿಡಿಒ ಮಂಜುಳಾ, ಅಭಿವೃದ್ಧಿ ಅಧಿಕಾರಿ ಮೀನಾಕ್ಷಮ್ಮಣ್ಣಿ, ಪಳನಿಸ್ವಾಮಿ, ಮುಖ್ಯಶಿಕ್ಷಕಿ ಶಶಿಕಲಾ ಇತರರು ಹಾಜರಿದ್ದರು. ಭಾಗವಹಿಸಿದ ಎಲ್ಲ ಮಕ್ಕಳಿಗೂ ಅಭಿನಂದನಾ ಪತ್ರ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net