

ಹುಣಸೂರು: ಮಕ್ಕಳ ಕಲಿಕೆಯನ್ನು ತಿಳಿಯುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಕಲಿಕಾ ಹಬ್ಬವಾಗಿದೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ ಅಭಿಪ್ರಾಯಪಟ್ಟರು.
ಶನಿವಾರ ತಾಲೂಕಿನ ತಿಪ್ಪಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜನೆಗೊಂಡಿದ್ದ ಕೊತ್ತೇಗಾಲ ಕ್ಲಸ್ಟರ್‌ನ ಕಲಿಕಾಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ತರಬೇತಿ ಪಡೆದ ಶಿಕ್ಷಕರಿದ್ದಾರೆ. ಸರ್ಕಾರವು ಉಚಿತ ಶಿಕ್ಷಣ ನೀಡಿ ಪಾಲಕರ ಹೊರೆಯನ್ನು ಕಡಿಮೆ ಮಾಡಿದೆ. ಗುಣಮಟ್ಟದ ಶಿಕ್ಷಣವನ್ನು ನೀಡಲು ಆದ್ಯತೆ ನೀಡಲಾಗಿದೆ. ಮಕ್ಕಳಿಗೆ ನಿಗದಿಪಡಿಸಿದ ಪಠ್ಯದ ಜೊತೆಗೆ ಕೌಶಲ ಅಭಿವೃದ್ಧಿಯಾಗುವಂತೆ ಮಾಡಬೇಕು. ಮಕ್ಕಳ ಕಲಿಕೆಗೆ ಶಿಕ್ಷಕರು ವಿಶೇಷ ಗಮನಹರಿಸಿ ಸ್ಪಷ್ಟ ಓದು, ಶುದ್ಧ ಬರಹ, ಸುಲಭ ಲೆಕ್ಕಾಚಾರ ಬರುವಂತೆ ಮಾಡಿ ಸಂತಸದಾಯಕ ಕಲಿಕೆಯಾಗುವಂತೆ ಮಕ್ಕಳನ್ನು ಪ್ರೇರೇಪಿಸಬೇಕು. ಶಿಕ್ಷಣ ಇಲಾಖೆಯು ಕಲಿಕಾ ಹಬ್ಬ ಕಾರ್ಯಕ್ರಮ ಗಟ್ಟಿ ಓದು, ಕಥೆ ಹೇಳುವುದು, ಕೈಬರಹ, ಸಂತೋಷದಾಯಕ ಗಣಿತ, ಮೆಮೊರಿ ಪರೀಕ್ಷೆ, ರಸಪ್ರಶ್ನೆ, ಪಾಲಕರು ಮತ್ತು ಮಕ್ಕಳ ಸಹ ಸಂಬಂಧಕ್ಕೆ ಸಂಬಂಧಿಸಿದ ಸ್ಪರ್ಧಾ ಚಟುವಟಿಕೆಗಳನ್ನು ಒಳಗೊಂಡಿವೆ.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ. ಬಿ. ಶಶಿಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ತಾವು ಕಲಿತಿರುವುದನ್ನು ಇತರರೊಂದಿಗೆ ಸ್ಪರ್ಧಿಸಿ ತಮ್ಮ ಕಲಿಕೆಯನ್ನು ಉತ್ತಮವಾಗಿಸುವ ಅವಕಾಶ ಇದೆ. ಮಕ್ಕಳ ಕಲಿಕೆಯನ್ನು ಅಳೆಯಲು ಉತ್ತಮ ವೇದಿಕೆ ಇದಾಗಿದೆ ಎಂದು ತಿಳಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಶಂಕರ್, ಉಪಾಧ್ಯಕ್ಷೆ ಶಿಲ್ಪಾ, ಗ್ರಾ.ಪಂ.ಅಧ್ಯಕ್ಷ ರವಿಕುಮಾರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹರವೆ ಮಹದೇವ್, ಯುಪಿಎಸ್‌ಸಿ ಪರೀಕ್ಷೆ ಸಾಧಕ ಲೇಖನ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾರುತಿ, ದೈಹಿಕ ಶಿಕ್ಷಣ ಪರಿವೀಕ್ಷಕ ಲೋಕೇಶ್, ಟಿ.ಲೋಕೇಶ್ ಇತರರು ಇದ್ದರು.