

ಮದ್ದೂರು: ತಾಲೂಕಿನ ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುವ ಮೂಲಕ ಪಂಚಾಯಿತಿಯನ್ನು ಮಾದರಿ ಪಂಚಾಯಿತಿಯನ್ನಾಗಿ ಮಾಡಿರುವುದು ಪ್ರಶಂಸನೀಯ ಎಂದು ಶಾಸಕ ಕೆ.ಎಂ.ಉದಯ್ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ಹೆಮ್ಮನಹಳ್ಳಿಯ ಗ್ರಾಪಂನಲ್ಲಿ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ ಮತ್ತು ಸ್ವಂತ ಸಂಪನ್ಮೂಲ ಅನುದಾನದಡಿ ನಿರ್ಮಾಣಗೊಂಡಿರುವ ಕಲಿಕಾ ಕೇಂದ್ರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಹೆಮ್ಮನಹಳ್ಳಿ ಗ್ರಾಪಂಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಹಾಗೂ ಅಧಿಕಾರಿಗಳ ಆಸಕ್ತಿಯಿಂದ ಪಂಚಾಯಿತಿ ಅಭಿವೃದ್ಧಿ ವಿಷಯದಲ್ಲಿ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿರುವುದು ಮೆಚ್ಚುಗೆಯ ವಿಷಯ ಎಂದರು.
ತಾಲೂಕಿನಲ್ಲಿ ಕೆಲವೇ ಕೆಲವು ಪಂಚಾಯಿತಿಗಳು ಮಾತ್ರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅದರಲ್ಲಿ ಹೆಮ್ಮನಹಳ್ಳಿ ಗ್ರಾಪಂ ಒಂದಾಗಿದೆ. ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸರ್ಕಾರದ ಸವಲತ್ತು ಹಾಗೂ ಅನುದಾನವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಪಂಚಾಯಿತಿಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದರು.
ಜನಪ್ರತಿಧಿಗಳು ಪಂಚಾಯಿತಿಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ರಾಜಕೀಯವನ್ನು ಬದಿಗೊತ್ತಿ ಅಧಿಕಾರಿಗಳಿಗೆ ಸಹಕಾರ ನೀಡಿದರೆ ಪಂಚಾಯಿತಿ ಅಭಿವೃದ್ಧಿಯಾಗುತ್ತದೆ ಎಂಬುವುದಕ್ಕೆ ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿಯೇ ಸಾಕ್ಷಿ ಎಂದರು.
ತಾಲೂಕಿನ ಎಲ್ಲ ಪಂಚಾಯಿತಿಗಳ ವ್ಯಾಪ್ತಿಯ ಹಳ್ಳಿಗಳ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಅಗತ್ಯ ಕ್ರಮ ಕೈಗೊಂಡಿದ್ದು, ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಕ ಕಲ್ಪಿಸಲು ಕ್ರಮ ಕೈಗೊಂಡಿದ್ದೇನೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಶಾಸಕ ಕೆ.ಎಂ.ಉದಯ್ ಅವರನ್ನು ಪಂಚಾಯಿತಿ ವತಿಯಿಂದ ಅಭಿನಂದಿಸಲಾಯಿತು. ಗ್ರಾಪಂ ಅಧ್ಯಕ್ಷೆ ವೀಣಾ, ಉಪಾಧ್ಯಕ್ಷ ಮಧುಸೂದನ್, ಮಾಜಿ ಅಧ್ಯಕ್ಷರಾದ ನಂದೀಶ್‌ಗೌಡ್ರು, ನಾಗೇಶ್, ಉಮೇಶ್, ತಾಪಂ ಇಒ ರಾಮಲಿಂಗಯ್ಯ, ಪಿಡಿಒ ಲೀಲಾವತಿ ಇದ್ದರು.