

ಎಂ.ಎಸ್.ಸಿದ್ದಲಿಂಗೇಶ್ವರ ಮಾಗಡಿ
ಮಾಗಡಿಯ ಕೆಎಸ್ಆರ್ಟಿಸಿ ಡಿಪೋದ ಬಹಳಷ್ಟು ಬಸ್ಗಳು ಮಳೆ ಬಂದಾಗ ಸೋರುತ್ತಿದ್ದು, ಬಸ್ ಹತ್ತಲು ನಾಗರಿಕರು ಹಿಂದೇಟು ಹಾಕುತ್ತಿದ್ದಾರೆ.
ಮಾಗಡಿ ಡಿಪೋನಲ್ಲಿ ಸುಮಾರು 88 ಬಸ್ಗಳಿದ್ದು, ಹಳೆಯ ಬಸ್ಗಳೇ ಹೆಚ್ಚಿದ್ದು, ಮಳೆ ಸುರಿಯುತ್ತಿದರೆ ಬಸ್ ಒಳಗಿದ್ದರೂ ನೆನೆಯುವುದು ಅನಿವಾರ್ಯವಾಗಿದೆ. ಬಸ್ಗಳಿಗೆ ಟಾರ್ ಶೀಟ್ ಅಳವಡಿಸದೆ ಇರುವುದರಿಂದ ಪ್ರಯಾಣಿಕರು ಸೋರುವ ಬಸ್ಗಳಲ್ಲೆ ಪ್ರಯಾಣ ಬೆಳೆಸುವಂತಾಗಿದೆ.
ಬೆಂಗಳೂರಿನಿಂದ ಮಾಗಡಿಗೆ ಬರುವವರೆಗೂ ಮಳೆ ನೀರು ಬಸ್ನಲ್ಲಿ ತೊಟ್ಟಿಕ್ಕುತ್ತಿತ್ತು. ಚಾಲಕ ಕೂಡ ನೆನೆದುಕೊಂಡೆ ಚಾಲನೆ ಮಾಡಿಕೊಂಡು ಬಂದರು. ಬಹುತೇಕ ಮಂದಿ ದಾಖಲೆ ಪತ್ರಗಳು ನೀರಿನಿಂದ ಹಾಳಾಗಿವೆ ಎಂದು ಮಾಗಡಿ&ಹುಲಿದುರ್ಗ ಮಾರ್ಗದ ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ವಿಜಯವಾಣಿಗೆ ತಿಳಿಸಿದರು.
ಸುಮಾರು 5 ವರ್ಷಗಳಿಂದ ಹೊಸ ಬಸ್ ಖರೀದಿಸಿಲ್ಲ, ಕಂಡಕ್ಟರ್, ಡ್ರೆವರ್ಗಳನ್ನು ನೇಮಕ ಮಾಡಿಕೊಂಡಿಲ್ಲ, ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡಿರುವ ಸಿಬ್ಬಂದಿಗೆ ಜವಾಬ್ದಾರಿ ಇಲ್ಲದಂತಾಗಿದೆ. ಬಸ್ಗಳು ಸೋರಿದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಸರಿಪಡಿಸಿಕೊಳ್ಳುವ ಗೋಜಿಗೆ ಹೋಗದೆ ನಮಗೇಕೆ ಈ ಉಸಾಬರಿ ಎಂಬಂತಿದ್ದಾರೆ. ಇದರಿಂದ ಪ್ರಯಾಣಿಕರು ಸಮಸ್ಯೆ ಎದುರಿಸುವತಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್
ಬಸ್ನಲ್ಲಿ ಸೋರುತ್ತಿದ್ದನ್ನು ಕಂಡ ಯುವಕರು, ಅದನ್ನು ಮೊಬೈಲ್ನಲ್ಲಿ ಸೆರೆ ಹಿಡಿದು "ಸೋರುತಿಹುದು ಮಾಗಡಿ ಕೆಎಸ್ಆರ್ಟಿಸಿ ಬಸ್ಗಳು' ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಹರಿಬಿಟ್ಟಿದ್ದಾರೆ.
ಖಾಸಗಿ ಬಸ್ಗಳ ಮೊರೆ
ಮಾಗಡಿಯಿಂದ ಬೆಂಗಳೂರು, ರಾಮನಗರ, ಕನಕಪುರ, ತುಮಕೂರು, ನೆಲಮಂಗಲ, ಕುಣಿಗಲ್ ಮಾರ್ಗವಾಗಿ ಮೂರುನಾಲ್ಕು ವರ್ಷಗಳಿಂದ ಸರ್ಕಾರಿ ಬಸ್ಗಳ ಸಂಚಾರ ಹೆಚ್ಚಾದ ಕಾರಣ ಖಾಸಗಿ ಬಸ್ಗಳ ಸಂಖ್ಯೆ ಇಳಿಕೆಯಾಗಿದ್ದವು. ಆದರೆ ಸರ್ಕಾರಿ ಬಸ್ ಅವ್ಯವಸ್ಥೆ ಕಂಡು ಪ್ರಯಾಣಿಕರು ಈಗ ಮತ್ತೆ ಖಾಸಗಿ ಬಸ್ಗಳತ್ತ ಮುಖಮಾಡುವಂತಾಗಿದೆ. ಮಹಿಳೆಯರಿಗೆ ಉಚಿತ ಪ್ರಯಾಣವಾದರೂ ನಮಗೆ ಉಚಿತ ಪ್ರಯಾಣ ಬೇಡ ಎನ್ನುವಂತಾಗಿದೆ.
ಸಮಸ್ಯೆಗಿಲ್ಲ ಪರಿಹಾರ
ಎಚ್.ಸಿ.ಬಾಲಕೃಷ್ಣ ಶಾಸಕರಾದ ನಂತರ ಮಾಗಡಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಎರಡು ಭಾರಿ ಕೆಎಸ್ಆರ್ಟಿಸಿ ಡಿಸಿ, ಡಿಪೋ ಮ್ಯಾನೇಜರ್ ಸೇರಿ ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಯಾಣಿಕರ ಕುಂದು&ಕೊರತೆ ಸಭೆ ನಡೆಸಿದ್ದಾರೆ. ಈ ವೇಳೆ ಸಾಕಷ್ಟು ಮಂದಿ ಪ್ರಯಾಣಿಕರು ಅಹವಾಲು ಸಲ್ಲಿಸಿದ್ದಾರೆ. ಆ ಸಮಸ್ಯೆಗಳಿಗೆ ಪರಿಹಾರ ನೀಡಲು ಅಧಿಕಾರಿಗಳು ಮುಂದಾಗಿಲ್ಲ.
ಮಳೆಗಾಲವಾದ ಕಾರಣ ಕಾರಿನಲ್ಲಿ ಓಡಾಡಲು ತೊಂದರೆ ಎಂದು ಕೆಎಸ್ಆರ್ಟಿಸಿ ಬಸ್ಗೆ ಹತ್ತಿದರೆ ನೆನೆಯುವಂತಾಗಿದೆ. ಈ ಬಗ್ಗೆ ನಿರ್ವಾಹಕರನ್ನು ಪ್ರಶ್ನಿಸಿದರೆ ನಾವೇನು ಮಾಡೋಣ ಸ್ವಾಮಿ, ಎಲ್ಲರಿಗೂ ನೀಡುವಂತೆ ನಿನಗೂ ಬಸ್ ನೀಡಿದ್ದೇವೆ ಎಂದು ನಮ್ಮ ಅಧಿಕಾರಿಗಳು ದಬ್ಬಾಳಿಕೆ ನಡೆಸುತ್ತಾರೆ ಎಂದು ಅಳಲು ತೋಡಿಕೊಂಡರು. ಮೇಲಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಪ್ರಯಾಣಿಕರಿಗೆ ಉತ್ತಮ ಬಸ್ ಸೇವೆ ನೀಡಬೇಕು.
ವಿನಯ್, ವ್ಯಾಪಾರಿ
ಸೋರುತ್ತಿರುವ ಬಸ್ಗಳನ್ನು ಸರಿಪಡಿಸುವಂತೆ ಸಂಬಂಧಪಟ್ಟವರಿಗೆ ತಿಳಿಸಲಾಗುವುದು. ಹೊಸ ಬಸ್ಗಳನ್ನು ನೀಡುವಂತೆ ಈಗಾಗಲೇ ಸಾರಿಗೆ ಸಚಿವರಿಗೆ ಮನವಿ ಮಾಡಲಾಗಿದೆ. ಶ್ರೀವೇ ಹೊಸ ಬಸ್ ನೀಡುವ ಭರವಸೆ ನೀಡಿದ್ದಾರೆ.
> ಎಚ್.ಸಿ.ಬಾಲಕೃಷ್ಣ
ಶಾಸಕ