

-ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ಕುಂದಾಪುರ ನಗರದ ಅಂದ ವೃದ್ಧಿಸಲು ನಿರ್ಮಿಸಿದ ಶಾಸ್ತ್ರಿ ವೃತ್ತದ ಈಗಿನ ಸ್ಥಿತಿ ನೋಡುವಾಗ ಅಂದಗೆಡಿಸಲೆಂದೇ ಇದನ್ನು ನಿರ್ಮಿಸಿದ್ದಾರೆಯೇ ಎನ್ನುವ ಅನುಮಾನ ಬಂದರೆ ಆಶ್ಚರ್ಯವಿಲ್ಲ. ಸುಂದರ ಕುಂದಾಪುರಕ್ಕೆ ಶಾಸ್ತ್ರಿ ಸರ್ಕಲ್ ಚಂದದ ದೃಷ್ಟಿ ಬೊಟ್ಟಾಗುತ್ತದೆ. ವಾಹನದಲ್ಲಿ ಹೋಗವವರು ವೃತ್ತದ ಅಂದ ನೋಡಿ ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತೇವೆ. ಶಾಸ್ತ್ರಿ ವೃತ್ತ ನೋಡುವುದಕ್ಕೇ ಜನ ಬರುತ್ತಾರೆ ಎಂದೆಲ್ಲ ಹೇಳಿದ ಕುಂದಾಪುರ ಪುರಸಭೆಯ ಬಣ್ಣದ ಮಾತು ಮಳೆನೀರಲ್ಲಿ ಕರಗಿ ಹೋಗುತ್ತಿದೆ.
ನಿಷ್ಠೆ, ಕ್ಷಮತೆ, ಪ್ರಾಮಾಣಿಕತೆ, ದೇಶಭಕ್ತಿಗೆ ಹೆಸರಾಗಿದ್ದ ಶಾಸ್ತ್ರಿ ನೆನಪಿನ ಮಂಟಪ ಸೋರಿ ಪ್ರತಿಮೆ ಮೇಲೆ ನೀರು ಬೀಳುತ್ತಿರುವುದನ್ನು ಶಾಸ್ತ್ರಿ ಆತ್ಮ ನೋಡಿದರೆ ನೊಂದುಕೊಳ್ಳಬಹುದು ಎನ್ನುವ ಚಿಕ್ಕ ಜ್ಞಾನವೂ ಪುರಸಭೆಗೆ ಇಲ್ಲದಿರುವುದು ಖೇದಕರ.
ಶಿಲಾ ಮಂಟಪ, ವೃತ್ತದ ಸುತ್ತಲಿನ ಕಾಂಪೌಂಡ್, ಹೂದೋಟ, ಕಾರಂಜಿ ಎಲ್ಲ ಸೇರಿ 40 ಲಕ್ಷ ರೂ. ವೆಚ್ಚದಲ್ಲಿ ನವೀಕೃತ ಶಾಸ್ತ್ರಿ ವೃತ್ತ ತಲೆ ಎತ್ತಿದೆ. 15 ಲಕ್ಷ ವೆಚ್ಚದ ಲಾಲ್ ಬಹದ್ದೂರ್ ಶಾಸ್ತ್ರಿ ಪ್ರತಿಮೆಯನ್ನು ಹೊಳೆ ಶಂಕರನಾರಾಯಣ ಕನ್ಸ್ಟ್ರಕ್ಷನ್ ಸಂಸ್ಥೆ ಕೊಡುಗೆಯಾಗಿ ನೀಡಿದೆ.ಕೊಡುಗೆ ನೀಡಿದವರು ಬಂದು ಶಾಸ್ತ್ರಿ ಪ್ರತಿಮೆ ಸೂರು ಸೋರುವುದನ್ನು ನೋಡಿದರೆ ಏನೆಂದುಕೊಳ್ಳಬಹುದು?
ಪುರಾತನ ಕಾಲದ ದೇವಸ್ಥಾನ, ಕಟ್ಟಡಗಳು ಯಾವುದೇ ಟೆಕ್ನಾಲಜಿ, ಯಂತ್ರೋಪಕರಣಗಳ ಇಲ್ಲದೆ ಕಟ್ಟಿದ್ದರೂ ಸೋರುವುದು ಇರಲಿ ಹೊಳಪು ಮಾಸಿಲ್ಲ. ಆದರೆ ಕುಂದಾಪುರ ಶಾಸ್ತ್ರಿ ಪಾರ್ಕ್ ಶಿಲಾ ಮಂಟಪ ನಿರ್ಮಿಸಿ ನೆಟ್ಟಗೆ ವರ್ಷವೂ ಆಗಿಲ್ಲ, ಈಗಲೇ ಸೂರುತ್ತಿದೆ. ಶಿಲಾಮಂಟಪ ಕಟ್ಟುವಾಗ ಕಲ್ಲುಗಳ ಸಂದುಗಳಿಗೆ ಗ್ಲೂ ಪೇಸ್ಟ್ ಹಾಕಿ ಅದರ ಮೇಲೆ ಹಾಸುಕಲ್ಲುಗಳನ್ನು ಕೂರಿಸುವ ಬದಲು ಹಾಸುಗಲ್ಲುಗಳನ್ನು ಎರ್ರಾಬಿರ್ರಿ ಕೂರಿಸಿರುವುದೇ ಸೋರುವುದಕ್ಕೆ ಕಾರಣ.
ತ್ರಿಕೋನಾಕೃತಿಯ ವೃತ್ತದಲ್ಲಿ ಚಿಕ್ಕದೊಂದು ಪ್ರತಿಮೆ ಇಟ್ಟು, ಅದರ ಸುತ್ತ ಸಂಘಟನೆಗಳ ನೆರವಲ್ಲಿ ಸಿಮೆಂಟ್ ಕಂಬಕಟ್ಟಿ ಅದರ ನಡುವಿಗೆ ಕಬ್ಬಿಣದ ರಾಡ್ ತುರುಕಿಸಿ, ಸಿಮೆಂಟ್ ಬೆಂಚ್ ಇಡಲಾಗಿತ್ತು. ಶಾಸ್ತ್ರಿ ಜನ್ಮದಿನ ಪುರಸಭೆಯವರು ಬಂದು ಪ್ರತಿಮೆಗೆ ಸ್ನಾನ ಮಾಡಿಸಿ, ಕತ್ತಿಗೊಂದು ಮಾಲೆ ತೂಗುಹಾಕಿ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಎಂಬ ಫೋಟೋ ಕ್ಯಾಪ್ಶನ್ ಬರೆದು ಬಿಟ್ಟರೆ ಮುಗಿದು ಹೋಗುತ್ತಿತ್ತು. ಪ್ರತಿಮೆ ಶಿಥಿಲಗೊಂಡು ಸುತ್ತಲಿನ ಗೇಟ್ ಜೀರ್ಣಾವಸ್ಥೆಗೆ ತಲುಪಿದ ಹಿನ್ನೆಲೆಯಲ್ಲಿ ವೃತ್ತ ನವೀಕರಣಕ್ಕೆ ಪುರಸಭೆ ಮುಂದಾಯಿತು. ಪ್ರತಿಮೆ ಹಳೆಯದ್ದೇ ಇಡಬೇಕಾ? ಹೊಸತು ಮಾಡಬೇಕಾ? ಹೊಸತಾದರೆ ಹಿಂದೆ ಇದ್ದ ಹಾಗೆ ಇರಬೇಕಾ, ನಿಂತ ಭಂಗಿಯಾ, ನಡಿಗೆಯಾ? ಶಿಲೆಯಾ, ಕಂಚಿಂದಾ ಎನ್ನುವ ಚರ್ಚೆ ಸಾಮಾನ್ಯ ಸಭೆಯಲ್ಲಿ ನಡೆದು ಕೊನೆಗೆ ನಡಿಗೆ ಭಂಗಿಯಲ್ಲಿ ಶಾಸ್ತ್ರಿ ಪ್ರತಿಮೆ ಮಾಡುವುದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿತು. ಕಂಚಿನ ಪ್ರತಿಮೆ ಮೇಲೆ ಮಳೆ ನೀರು ನಿರಂತರ ಸೋರಿದರೆ ಪ್ರತಿಮೆ ಬಣ್ಣಗೆಡೋದಿಲ್ವಾ? ಕುಂದಾಪುರ ಪುರಸಭೆ ಆಡಳಿತಕ್ಕೆ ಶಿಲಾಮಂಟಪ ಸೋರುತ್ತದೆ ಎನ್ನೋದು ಗೊತ್ತಿರಲಿಲ್ಲ. ಏಕೆಂದರೆ ಹುಲ್ಲುಹಾಸು ಮೊಳಕಾಲು ಮಟ್ಟಕ್ಕೆ ಅಡ್ಡಾದಿಟ್ಟಿ ಬೆಳೆದಿದ್ದು ಟ್ರಿಮ್ ಮಾಡಿಸಿಲ್ಲ. ಅಂದರೆ ಅವರು ಪಾರ್ಕ್ ಒಳಗೆ ಎಂಟ್ರಿಯೇ ಕೊಟ್ಟಿಲ್ಲ ಅನ್ನೋದಕ್ಕೆ ಸಾಕ್ಷಿ.
ಶಾಸ್ತ್ರಿ ವೃತ್ತದ ನವೀಕೃತ ಶಿಲಾ ಮಂಟಪ ಸೋರುತ್ತಿರುವುದು ಗಮನಕ್ಕೆ ಬಂದಿಲ್ಲ. ತಕ್ಷಣ ಪುರಸಭೆ ಇಂಜಿನಿಯರ್ ಸ್ಥಳಕ್ಕೆ ಕಳುಹಿಸಿ ಏಕೆ ಸೋರುತ್ತಿದೆ ಎಂಬುದರ ಕುರಿತು ಮಾಹಿತಿ ಪಡೆದು ಸೋರುವುದನ್ನು ತಡೆಗಟ್ಟಲು ಏನು ಮಾಡಬೇಕು ಎನ್ನುವುದನ್ನು ಸಭೆಯಲ್ಲಿ ಚರ್ಚಿಸಿ ನಿರ್ಧಾರ ತಗೆದಕೊಳ್ಳಲಾಗುತ್ತದೆ. ಶಾಸ್ತ್ರಿ ವೃತ್ತದ ಹುಲ್ಲು ಹಾಗೂ ಇನ್ನಿತರ ವ್ಯವಸ್ಥೆ ಬಗ್ಗೆಯೂ ನಿಗಾ ಇಡಲಾಗುತ್ತದೆ.-ಮಂಜುನಾಥ ಆರ್., ಮುಖ್ಯಾಧಿಕಾರಿ, ಪುರಸಭೆ ಕುಂದಾಪುರ