

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ಈ ಬಾರಿ ಮಳೆ ಬಾರದಿರುವುದರಿಂದ ರೈತರು ಬಿತ್ತನೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇಷ್ಟರೊಳಗೆ ಬಿತ್ತನೆ ಪ್ರಾರಂಭವಾಗಿ ಭತ್ತ ತೆನೆ ಬಿಡಲು ಪ್ರಾರಂಭವಾಗಬೇಕಿತ್ತು.ಭತ್ತದ ನಾಟಿಗೆ ಮತ್ತು ನಂತರ ನೀರಿನ ಅವಶ್ಯಕತೆ ಅಧಿಕವಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಕೃಷಿಕರ ಬವಣೆಗೆ ವರವಾಗಿರುವುದು ಕೂರ್ಗಿ ಬೇಸಾಯ ಪದ್ಧತಿ. ಈ ರೀತಿಯ ಬೇಸಾಯಕ್ಕೆ ಕಡಿಮೆ ನೀರಿನ ಅವಶ್ಯಕತೆ ಇರುವುದರಿಂದ ವಾರದಲ್ಲಿ ಒಮ್ಮೆ ಮಳೆ ಬಂದರೂ ಸಾಕಾಗುತ್ತದೆ. ಪೈರುಗಳು ಗಟ್ಟಿಯಾಗಿರುವುದರಿಂದ ನೆರೆ ಬಂದರೂ ಹಾನಿಯಾಗುವುದಿಲ್ಲ.
ಕಡಿಮೆ ಮಳೆಯಾಗುವಾಗ ಕೂರ್ಗಿ ಪದ್ಧತಿ ಬಿತ್ತನೆ ಫಲದಾಯಕವಾಗಿದೆ. ಬಿತ್ತನೆ ಮಾಡಿದ 48 ಗಂಟೆಗಳಲ್ಲಿ ಥಂಡಿಮೆತಾಲಿಯನ್ 30 ವಿ.ಸಿ.ಕಳೆ ನಾಶಕವನ್ನು ಜಮೀನಿಗೆ ಒಂದು ಎಕರೆಗೆ ಒಂದು ಲೀಟರ್ ಹಾಗೂ 250 ಲೀಟರ್ ನೀರು ಸಿಂಪಡಿಸಿದರೆ ಕಳೆ ನಿಯಂತ್ರಣವಾಗುತ್ತದೆ. ಕಳೆ ನಾಶಕವನ್ನು ಹಿಂದಕ್ಕೆ ಬರುತ್ತಾ ಸಿಂಪಡಿಸುತ್ತಾ ಬರಬೇಕು. ಸಿಂಪಡಿಸಿದ ಜಾಗವನ್ನು ತುಳಿಯುವಂತಿಲ್ಲ. ಈ ಪದ್ಧತಿ ಈಗಾಗಲೇ ಕೋಟ, ಕುಂದಾಪುರ, ತೆಕ್ಕಟ್ಟೆ, ಚೇರ್ಕಾಡಿ ಹಾಗೂ ಕೊಕ್ಕರ್ಣೆ ಭಾಗಗಳಲ್ಲಿ 200 ಎಕರೆಗೂ ಅಧಿಕ ಗದ್ದೆಗಳಲ್ಲಿ ರೈತರು ಆರಂಭಿಸಿದ್ದಾರೆ. ಉಳುಮೆ ಮಾಡುವ ಗದ್ದೆಗಳಲ್ಲಿ ಮಾತ್ರ ಈ ಪದ್ಧತಿ ಮಾಡಬೇಕು.
ಈ ರೀತಿಯ ಪದ್ಧತಿಯಿಂದ ನೀರಿನ ಅವಶ್ಯಕತೆ ತುಂಬಾ ಕಡಿಮೆ. ಬಿತ್ತನೆ ಮಾಡಿದ 15 ದಿನಗಳ ತನಕ ಕಡಿಮೆ ನೀರು ಸಾಕಾಗುತ್ತದೆ.ಪೈರು ಸದೃಢವಾಗಿರುವುದರಿಂದ ನೆರೆ ಬಂದರೂ ಹಾನಿಯಾಗುವುದಿಲ್ಲ. ಎಕರೆಗೆ 20 ರಿಂದ 25 ಕ್ವಿಂಟಾಲ್ ಫಸಲು ಪಡೆಯಬಹುದು. ಯಂತ್ರಗಳು ನೇರವಾಗಿ ಗದ್ದೆಗೆ ಇಳಿಯುವುದರಿಂದ ಕೂಲಿ ಕಡಿಮೆ. ಒಂದು ಎಕರೆಗೆ 10 ರಿಂದ 13 ಕೆ.ಜಿ.ಭತ್ತದ ಬೀಜವನ್ನು ಗದ್ದೆಯನ್ನು ಟ್ರ್ಯಾಕ್ಟರ್ ಮೂಲಕ 2 ಸಲ ಉಳುಮೆ ಮಾಡಿ ಇನ್ನೊಂದು ಟ್ರಾೃಕ್ಟರ್ನಿಂದ ಬೀಜ ಬಿತ್ತನೆ ಮಾಡಿದರೆ ಸಾಕು. ಈ ಪದ್ಧತಿಯಿಂದ ದೊರೆಯುವ ಹುಲ್ಲು ಕೂಡ ಉತ್ತಮ ಗುಣಮಟ್ಟದ್ದಾಗಿದ್ದು ನೆರೆ ಬಂದರೂ ಹುಲ್ಲು ಕೊಳೆಯುವುದಿಲ್ಲ.
ಕೂರ್ಗಿ ಪದ್ಧತಿಯನ್ನು ಪ್ರಥಮವಾಗಿ 2019ರಲ್ಲಿ ಕೊಕ್ಕರ್ಣೆ ಮೊಗವೀರಪೇಟೆಯ ಪ್ರಗತಿಪರ ಕೃಷಿಕ ಗಣೇಶ್ ಕಾಮತ್ ಪ್ರಾತ್ಯಕ್ಷಿಕೆ ನಡೆಸಿ ಯಶಸ್ವಿಯಾಗಿದ್ದಾರೆ. ಕೃಷಿ ಇಲಾಖೆ ಬ್ರಹ್ಮಾವರ ಕೂಡ ಮಾರ್ಗದರ್ಶನ ನೀಡಿದೆ. ಇದರಿಂದಾಗಿ ಗ್ರಾಮೀಣ ಭಾಗದ ರೈತರು ಈ ಬಾರಿ ನೀರಿನ ಅಭಾವದ ನಡುವೆಯೂ ಕೂಡ ಬಿತ್ತನೆ ಮಾಡುವಲ್ಲಿ ನಿರತರಾಗಿದ್ದಾರೆ.
ಸಹ್ಯಾದ್ರಿ ಪಂಚಮುಖಿ ಭತ್ತದ ತಳಿಯ ಬಿತ್ತನೆ ಗದ್ದೆಗಳಲ್ಲಿ ಮಾಡಿದರೆ ಉತ್ತಮ ಇಳುವರಿ, ಗುಣಮಟ್ಟದ ಹುಲ್ಲು ಹಾಗೂ ಪೌಷ್ಟಿಕಾಂಶ ಉಳ್ಳ ಭತ್ತ ದೊರೆಯುತ್ತದೆ.ಎಂ.ಒ.4 ಬಿತ್ತನೆ ಮಾಡಿದರೆ ಭತ್ತದ ಇಳುವರಿ ಕಡಿಮೆಯಾಗಿ ಹುಲ್ಲಿನ ಗುಣಮಟ್ಟವೂ ಕಡಿಮೆ ಎನ್ನುವುದು ರೈತರ ಅನಿಸಿಕೆ.
ಸಾಂಪ್ರದಾಯಿಕ ಪದ್ಧತಿಯಿಂದ ಒಂದು ಎಕರೆ ಭತ್ತ ಬೆಳೆಯಲು 20 ಸಾವಿರ ರೂ. ವೆಚ್ಚ ತಗಲುತ್ತದೆ. ಕೂರ್ಗಿ ಪದ್ಧತಿ ಅಳವಡಿಕೆಯಿಂದ ಒಂದು ಎಕರೆಗೆ 8 ಸಾವಿರ ರೂ ಸಾಕು. ಕೂರ್ಗಿ ಪದ್ಧತಿಯಲ್ಲಿ ಬಿತ್ತನೆಗೆ ಮಳೆಯ ಅವಶ್ಯಕತೆ ಇರುವುದಿಲ್ಲ. ತಿಂಗಳ ನಂತರ ಮಳೆ ಬಂದರೂ ಬಿತ್ತಿದ ಬೀಜ ಹಾಳಾಗುವುದಿಲ್ಲ. ಈ ಪದ್ಧತಿ ರೈತರಿಗೆ ವರದಾನ.-ರಘುವೀರ ಕಿಣಿ ಮೊಗವೀರಪೇಟೆ ಪ್ರಗತಿಪರ ಕೃಷಿಕರು
ಸದ್ಯದ ಮಳೆಯ ಪರಿಸ್ಥಿತಿಗೆ ಕೂರ್ಗಿ ಬೇಸಾಯ ಪದ್ಧತಿ ಉತ್ತಮ ಆಯ್ಕೆ. ಕಳೆ ನಾಶಕ ಎರಡು ಬಾರಿ ಮಾಡಬೇಕಾಗುತ್ತದೆ. ಬಿತ್ತನೆಗೂ ಮೊದಲು ಮತ್ತು ನಂತರ ಕೂಲಿ ಆಳುಗಳ ಖರ್ಚು ಕಡಿಮೆ. ಉತ್ತಮ ಇಳುವರಿ ದೊರೆಯುತ್ತದೆ. ಗ್ರಾಮೀಣ ಭಾಗದ ರೈತರಿಗೆ ಈ ಪದ್ಧತಿ ವರದಾನವಾಗಿದೆ.-ಡಾ.ಧನಂಜಯ್ ಬಿ.ಹಿರಿಯ ವಿಜ್ಞಾನಿ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ