ದಾವಣಗೆರೆ ವಿವಿಯಲ್ಲಿ ರಾಜ್ಯಮಟ್ಟದ ಎನ್‌ಎಸ್‌ಎಸ್ ಯುವಜನೋತ್ಸವ

172
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಎನ್‌ಎಸ್‌ಎಸ್ ಯುವಜನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಡಾ.ಎಂ.ಬಿ. ದಳಪತಿ ಉದ್ಘಾಟಿಸಿದರು. ಡಾ.ಅಶೋಕಕುಮಾರ ವಿ. ಪಾಳೇದ, ಪ್ರೊ.ಪಿ.ಅಣ್ಣೇಶ, ಜಿ.ಮಂಜುನಾಥ, ಡಾ.ತಿಪ್ಪೇಸ್ವಾಮಿ ಇದ್ದರು.
Published on

ದಾವಣಗೆರೆ: ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಲು ಸಹಕಾರಿಯಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾನಿಲಯದ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಎಂ.ಬಿ.ದಳಪತಿ ಹೇಳಿದರು.

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಎನ್‌ಎಸ್‌ಎಸ್ ಯುವಜನೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ ಸಂಬಂಧಗಳ ಮಹತ್ವ, ಭಾವೈಕ್ಯತೆ, ಸೌಹಾರ್ದಯುತ ವಾತಾವರಣ ನಿರ್ಮಾಣ, ಸಮಯಪಾಲನೆ, ಶಿಸ್ತು, ಕರ್ತವ್ಯ ನಿಷ್ಠೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಎನ್‌ಎಸ್‌ಎಸ್ ಪೂರಕವಾಗಿದೆ ಎಂದು ತಿಳಿಸಿದರು.

ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಜತೆಗೆ ಸ್ನೇಹ, ವಿಶ್ವಾಸಾರ್ಹತೆ ಮತ್ತು ಬಾಂಧವ್ಯ ಬೆಸೆಯಲು ಯುವಜನೋತ್ಸವ ಉತ್ತಮ ವೇದಿಕೆಯಾಗಿದೆ. ರಾಜ್ಯದ ಬೇರೆ ಬೇರೆ ಪ್ರದೇಶದ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಪರಿಚಯ ಮಾಡಿಕೊಡುತ್ತದೆ ಎಂದರು.

ವಿದ್ಯಾರ್ಥಿಗಳು ಮೊಬೈಲ್ ದಾಸರಾಗದೆ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸಿ ಬದುಕನ್ನು ವಿಕಸನ ಮಾಡಿಕೊಳ್ಳಬೇಕು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆ ಪ್ರದರ್ಶಿಸುವ ಮೂಲಕ ಉತ್ತಮ ಅವಕಾಶಗಳನ್ನು ಪಡೆದುಬಕೊಳ್ಳಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಯುವಜನೋತ್ಸವದ ಸಂಯೋಜನಾಧಿಕಾರಿ ಡಾ. ಅಶೋಕಕುಮಾರ ವಿ. ಪಾಳೇದ ಮಾತನಾಡಿ, ವಿದ್ಯಾರ್ಥಿಗಳ ನಡುವೆ ಸೌಹಾರ್ದಯುತ ಸಂಬಂಧ ಬೆಸೆಯುವುದು, ನಾಡಿನ ಸಾಂಸ್ಕೃತಿಕ ಪರಂಪರೆ ಪರಿಚಯಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ.ಪಿ.ಅಣ್ಣೇಶ, ಜಿ. ಮಂಜುನಾಥ, ಡಾ. ತಿಪ್ಪೇಸ್ವಾಮಿ, ಲೋಕೇಶ ನಾಯಕ ಇದ್ದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net