

ಪವನ್ ಆಚಾರ್ಯ ನೀರ್ಚಾಲು ಬೆಂಗಳೂರು
ಮಳೆಗಾಲ ಆರಂಭದ ನಿರೀೆ ಇದ್ದು, ಇದೀಗ ಬೆಂಗಳೂರಿನಲ್ಲಿ ಮಳೆ ಎಂದರೆ ಬೆಚ್ಚಿ ಬೀಳುವ ಪರಿಸ್ಥಿತಿ ಇದೆ. ಇತ್ತೀಚೆಗೆ ಕೆಲ ದಿನಗಳ ಕಾಲ ಬಿಡದೆ ಸುರಿದ ಮಳೆಯಿಂದ ಆದ ಅವಾಂತರ ಎಲ್ಲರಿಗೂ ತಿಳಿದಿದೆ. ರಾಜಧಾನಿ ನಿವಾಸಿಗಳ ಜೀವನಾಡಿಯಾಗಿರುವ "ನಮ್ಮ ಮೆಟ್ರೋ' ನಿಲ್ದಾಣಗಳಲ್ಲಿ ಮೇಲ್ಛಾವಣಿಯಿಂದ ನೀರು ಸೋರಿಕೆಯಾಗುತ್ತಿರುವುದು ಮತ್ತೊಂದು ಸಮಸ್ಯೆಯಾಗಿದ್ದು, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ(ಬಿಎಂಆರ್ಸಿಎಲ್) ನಿರ್ವಹಣಾ ವೈಲ್ಯಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಮೆಟ್ರೋ ಪ್ರಾರಂಭವಾಗಿ 14 ವರ್ಷಗಳಾದರೂ ಇಲ್ಲಿಯವರೆಗೂ ಮಳೆ ಬಂದಾಗ ನಿಲ್ದಾಣದ ಮೇಲ್ಛಾವಣಿಯಿಂದ ನೀರು ಜಿನುಗುವುದು ನಿಂತಿಲ್ಲ. ನೀರು ಸೋರಿಕೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಬಿಎಂಆರ್ಸಿಲ್ ಸೋತಿದೆ. ಕಳಪೆ ಕಾಮಗಾರಿ ಮಾಡಿರುವುದೇ ಮೇಲ್ಛಾವಣಿ ಸೋರಿಕೆಗೆ ಕಾರಣ ಎಂದು ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಆದರೆ, ನೇರಳೆ ಬಣ್ಣದ ಸುರಂಗ ಮಾರ್ಗದ ಮೆಟ್ರೋ ನಿಲ್ದಾಣಗಳ ಆಸುಪಾಸು ಅಂತರ್ಜಲಮಟ್ಟ ನೆಲದಿಂದ ಕೇವಲ 4 ರಿಂದ 5 ಮೀ. ಆಳದಲ್ಲಿದೆ. ಇಲ್ಲಿ ಮೆಟ್ರೋ ನಿಲ್ದಾಣಗಳಿರುವುದು ನೆಲದಿಂದ 15 ಮೀ. ಅಡಿಯಲ್ಲಿ. ಆದ್ದರಿಂದಲೇ ಈ ಭಾಗದ ನಿಲ್ದಾಣಗಳಲ್ಲಿ ಅಂತರ್ಜಲ ಒಸರಿರುತ್ತದೆ. ಗೋಡೆಗಳನ್ನು ಭದ್ರವಾಗಿ ಸೀಲ್ ಮಾಡಿದ್ದರೂ, ಹತ್ತಾರು ಕಡೆಗಳಲ್ಲಿ ನೀರು ಸೋರುತ್ತಲೇ ಇರುತ್ತದೆ. ಜತೆಗೆ ಜೋರಾಗಿ ಮಳೆ ಬಂದಾಗ ನಿಲ್ದಾಣದೊಳಗಡೆ ನೀರು ಬಿಳುವುದು ಸ್ವಾಭಾವಿಕ. ಇಂಥ ನಿಲ್ದಾಣಗಳಲ್ಲಿ ನೀರು ಸೋರಿಕೆಯಾಗುವುದಕ್ಕೆ ಕಳಪೆ ಕಾಮಗಾರಿ ಕಾರಣ ಎಂದು ಹೇಳಲು ಸಾಧ್ಯವಿಲ್ಲ ಎಂದು ಬಿಎಂಆರ್ಸಿಎಲ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉಳಿದಂತಹ ನಿಲ್ದಾಣಗಳಲ್ಲೂ ಸೋರುತ್ತಿರುವುದು ಪ್ರಶ್ನಾರ್ಥಕ. ಅಲ್ಲಿ ಕಾಮಗಾರಿಯನ್ನು ನಡೆಸಬೇಕು ಎಂದಿದ್ದರೆ, ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಮೆಟ್ರೋ ಕಾರ್ಯಚರಣೆ ಸಮಯದಲ್ಲಿ ನಿಲ್ದಾಣದಲ್ಲಿ ಕೆಲಸ ಮಾಡಲಾಗುವುದಿಲ್ಲ. ಮೆಟ್ರೋ ಸಂಚಾರ ಮುಗಿದ ನಂತರ ಮತ್ತು ಮುಂಜಾನೆ ಸಂಚಾರ ಆರಂಭವಾಗುವ ಮುನ್ನ ಕಾಮಗಾರಿ ನಡೆಸಬೇಕಾಗುತ್ತದೆ. ಈ ಕಾಮಗಾರಿ ಪೂರ್ಣಗೊಳ್ಳಲು ಸುಮಾರು ಒಂದು ವರ್ಷ ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಮಸ್ಯೆ ಏನು?: ಕೆಲವು ಮೆಟ್ರೋ ನಿಲ್ದಾಣಗಳಲ್ಲಿ ಮಳೆ ಬಂದಾಗ ನಿಲ್ದಾಣದ ಮೇಲ್ಛಾವಣಿಯಿಂದ ನೀರು ಜಿನುಗುತ್ತದೆ. ಇದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗಬಾರದೆನ್ನುವ ನಿಟ್ಟಿನಲ್ಲಿ ನೀರು ಬಿಳುವ ಕಡೆಗಳಲ್ಲಿ ಬಕೆಟ್ ಇಡುವುದು, ಬಿದ್ದ ನೀರನ್ನು ಒರೆಸುವ ಕೆಲಸ ಸಿಬ್ಬಂದಿ ಆಗಾಗಿಂದಾಗೆ ಮಾಡುತ್ತಿರುತ್ತಾರೆ. ಪ್ರಯಾಣಿಕರು ಇದರಿಂದ ತೊಂದರೆಗೆ ಒಳಗಾಗಿದ್ದು, ಜಾರಿ ಬಿದ್ದ ಟನೆಗಳೂ ಇದೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಸೇವೆಯನ್ನು ನೀಡುತ್ತಿರುವಾಗ, ಅದರಲ್ಲೂ ಇತ್ತೀಚೆಗೆ ಸೇವೆಯನ್ನು ಇನ್ನಷ್ಟು ಸುಲಭಗೊಳಿಸಲು ಪ್ರಯಾಣ ದರ ಏರಿಕೆ ಕೂಡ ಮಾಡಿತ್ತು. ಇಷ್ಟೇಲ್ಲ ಮಾಡಿಯೂ, ಮೂಲ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮಂಡಳಿ ವೈಲ್ಯ ಕಂಡಿದೆ. ಮಳೆಗಾಲದ ಹೊಸ್ತಿಲಲ್ಲಿ ನಿಂತಿರುವಾಗ ಈಗಲೇ ಇಂಥ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿರುವುದು ಅಗತ್ಯವಾಗಿದೆ. ಇಲ್ಲವಾದಲ್ಲಿ ಕೆಂಗಣ್ಣಿಗೆ ಗುರಿಯಾಗಬೇಕಾದೀತು ಎಂದು ಪ್ರಯಾಣಿಕರೊಬ್ಬರು ಬಿಎಂಆರ್ಸಿಎಲ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಹೆಚ್ಚಾಗಿ ಎತ್ತರಿಸಲ್ಪಟ್ಟ ನಿಲ್ದಾಣಗಳಲ್ಲೇ ನೀರು ಸೋರಿಕೆಯಾಗುತ್ತಿರುವುದು ಗಮನಿಸಬೇಕಾಗಿರುವ ಸಂಗತಿ. ಇದಕ್ಕೆ ನಿರ್ವಹಣಾ ವೈಲ್ಯವೇ ಕಾರಣವಾಗಿದೆ. ನಿರ್ವಹಣೆ ನೆಪದಲ್ಲಿ ಪ್ರಯಾಣ ದರ ಏರಿಕೆ ಮಾಡಲಾಗಿದೆ. ಆದರೆ, ಇದುವರೆಗೂ ನೀರು ಸೋರಿಕೆಯಂಥ ಸಮಸ್ಯೆಗೆ ಪರಿಹಾರ ನೀಡಲು ಆಗಿಲ್ಲ. ಮಕ್ಕಳು, ವೃದ್ಧರು ನಡೆದಾಡುವಾಗ ಜಾರಿ ಬೀಳುವ ಸಾಧ್ಯತೆ ಇದೆ. ರೈಲು ಹಾಗೂ ನಿಲ್ದಾಣದಲ್ಲಿ ವಿದ್ಯುತ್ ಚಲನೆ ಇರುವುದರಿಂದ ಅದೂ ಕಂಟಕವಾಗಬಹುದು. ಪ್ರತಿಭಟನೆಗೆ ಮಣಿದು ಶೌಚಗೃಹ ಶುಲ್ಕ ವಾಪಸ್ ಪಡೆದಿದ್ದಾರೆ. ಸೋರಿಕೆ ಸಮಸ್ಯೆಗೂ ಪರಿಹಾರ ನೀಡಲಿ. > ರಾಜೇಶ್ ಭಟ್, ಸಂಚಾಲಕ, ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಟನೆ
ಟೆಂಡರ್ ಕರೆಯಲು ವಿಳಂಬ
ಈ ಬಾರಿಯೂ ನೇರಳೆ ಹಾಗೂ ಹಸಿರು ಬಣ್ಣದ ಮಾರ್ಗದ ನಿಲ್ದಾಣದ ಮೇಲ್ಛಾವಣಿಯಿಂದ ನೀರು ಸೋರಿಕೆಯಾಗುವುದನ್ನು ತಡೆಯಲು ಬಿಎಂಆರ್ಸಿಲ್ ಏಪ್ರಿಲ್ನಲ್ಲಿ ಟೆಂಡರ್ ಕರೆದಿದೆ. ಸದ್ಯ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಜೂನ್ನಲ್ಲಿ ಅಂತಿಮಗೊಳ್ಳಲಿದೆ. ಆ ನಂತರ ಕಾಮಗಾರಿ ಆರಂಭವಾಗಬೇಕಿದೆ. ಇನ್ನೇನು ಮುಂಗಾರು ಬಂದೇ ಬಿಟ್ಟಿತು! ಹಾಗಾಗಿ ಈ ಬಾರಿಯೂ ನಿಲ್ದಾಣದ ಮೇಲ್ಛಾವಣಿಯಿಂದ ನೀರು ಸೋರಿಕೆಯಾಗಿ ಪ್ರಯಾಣಿಕರಿಗೆ ತೊಂದರೆ ಕೊಡುವುದು ಖಚಿತವಾಗಿದೆ.