

ಬೆಂಗಳೂರು: ಚಿಕ್ಕನಾಗಮಂಗಲ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ನೂತನವಾಗಿ ಸ್ಥಾಪಿಸಿರುವ ಲೀಚೆಟ್ ಸಂಸ್ಕರಣಾ ಘಟಕವನ್ನು ಶೀಘ್ರದಲ್ಲೇ ಕಾರ್ಯಾರಂಭ ಮಾಡಲು ಅಗತ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ದಕ್ಷಿಣ ವಲಯ ಆಯುಕ್ತ ಜಯರಾಮ್ ರಾಯಪುರ ಸೂಚಿಸಿದರು.
ಚಿಕ್ಕನಾಗಮಂಗಲ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಶುಕ್ರವಾರ ಭೇಟಿ ನೀಡಿದ ಬಳಿಕ ಮಾತನಾಡಿದರು. ತ್ಯಾಜ್ಯದಿಂದ ಉತ್ಪತ್ತಿಯಾಗುವ ಲೀಚೆಟ್ ಅನ್ನು ವೈಜ್ಞಾನಿಕವಾಗಿ ಸಂಸ್ಕರಿಸಲು ವಿನೂತನ ಮಾದರಿಯಲ್ಲಿ ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ. ಪ್ರಾಯೋಗಿಕವಾಗಿ ಲೀಚೆಟ್ ನೀರನ್ನು ಸಂಸ್ಕರಣೆ ಮಾಡಲಾಗುತ್ತಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಸಿಕ್ಕಿದ ಬಳಿಕ ಇದನ್ನು ಉದ್ಘಾಟಿಸುವ ಮೂಲಕ ಪೂರ್ಣ ಪ್ರಮಾಣದಲ್ಲಿ ಆರಂಭಿಸುವುದಾಗಿ ಹೇಳಿದರು.
ಈ ಘಟಕವು ಪ್ರತಿನಿತ್ಯ 50 ಸಾವಿರ ಲೀಟರ್ ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ. ಸಂಸ್ಕರಿಸಿದ ಶುದ್ಧ ನೀರನ್ನು ರೈತರಿಗೆ ಅಥವಾ ಕಟ್ಟಡ ನಿರ್ಮಾಣ ಮಾಡುವವರಿಗೆ ಉಚಿತವಾಗಿ ನೀಡಲಾಗುವುದು ಎಂದು ಹೇಳಿದ ಅವರು, ಚಿಕ್ಕನಾಗಮಂಗಲ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಪ್ರತಿನಿತ್ಯ 300 ಟನ್ ತ್ಯಾಜ್ಯ ಸಂಸ್ಕರಿಸುವ ಸಾಮರ್ಥ್ಯವಿದೆ. ಪ್ರತಿನಿತ್ಯ ಸರಾಸರಿ 280 ಟನ್ ತ್ಯಾಜ್ಯ ಸಂಸ್ಕರಣೆ ಮಾಡಲಾಗುತ್ತಿದೆ. ದುರಸ್ಥಿ ಇರುವ ಯಂತ್ರಗಳನ್ನು ಕೂಡಲೇ ಸರಿಪಡಿಸಬೇಕು. ಎಲ್ಇಡಿ ದೀಪ ಅಳವಡಿಸಿ 24 ಗಂಟೆಯೂ ತ್ಯಾಜ್ಯ ಸಂಸ್ಕರಣಾ ಘಟಕವು ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ತ್ಯಾಜ್ಯ ಸಂಸ್ಕರಣಾ ಘಟಕ ಬಗ್ಗೆ ನಾಗರಿಕರಿಗೆ, ಶಾಲಾ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ ಪ್ರತಿ ಗುರುವಾರದಿಂದ ಶನಿವಾರದವರೆಗೆ ಪ್ರತಿನಿತ್ಯ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಭೇಟಿ ನೀಡಿ ಮಾಹಿತಿ ಪಡೆಯುವ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಜಯರಾಮ್ ರಾಯಪುರ ಹೇಳಿದರು. ಜಂಟಿ ಆಯುಕ್ತ ಡಾ.ಕೆ. ಜಗದೀಶ್ ನಾಯ್ಕ, ವಲಯ ಮುಖ್ಯ ಆಭಿಯಂತರ ರಾಜೇಶ್, ಸಂಸ್ಕರಣಾ ಘಟಕದ ವ್ಯವಸ್ಥಾಪಕಿ ಅರ್ಪಿತಾ ಸೇರಿ ಮತ್ತಿತರರಿದ್ದರು.