3 ಸಾವಿರ ಹಣ ಕೊಟ್ಟು ನನ್ನ ಕಾರಿಗೆ ಡೀಸೆಲ್ ಹಾಕಿಸದಷ್ಟು ದುರ್ಗತಿ ಬಂದಿಲ್ಲ... ಎನ್ನುತ್ತಲೇ ಸಿಡಿಮಿಡಿಗೊಂಡ ಸವದಿ

lakshman savadi car
Published on

ಚಿಕ್ಕೋಡಿ: 3 ಸಾವಿರ ಹಣ ಕೊಟ್ಟು ನನ್ನ ಕಾರಿಗೆ ಡೀಸೆಲ್ ಹಾಕಿಸಿಕೊಳ್ಳದಂತಹ ದುರ್ಗತಿ ಬಂದಿಲ್ಲ... ಎನ್ನುತ್ತಲೇ ಸಿಡಿಮಿಡಿಗೊಂಡ ಸವದಿ3 ಸಾವಿರ ರೂಪಾಯಿ ಕೊಟ್ಟು ನನ್ನ ಕಾರಿಗೆ ಡೀಸೆಲ್ ಹಾಕಿಸಿಕೊಳ್ಳದಂತಹ ದುರ್ಗತಿ ನನಗೆ ಬಂದಿಲ್ಲ. ಭಗವಂತ ನಮ್ಮ ಮನೆತನವನ್ನ ಉತ್ತಮ ಸ್ಥಿತಿಯಲ್ಲಿಟ್ಟಿದ್ದಾನೆ. ನಾನು 3 ಸಾವಿರ ರೂ.ಗಾಗಿ ಜುಗ್ಗತನ ಹಾಗೂ ಕೀಳುತನ ಮಾಡಿಲ್ಲ. ಯಾರೋ ಆಗಲಾದವರು ನನ್ನ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ, ಅವರಿಗೆ ಒಳ್ಳೆಯದಾಗಲಿ. ಯಾವ ಮರದಲ್ಲಿ ಹಣ್ಣು ಇರುತ್ತವೆಯೋ ಅಂಥ ಮರಗಳಿಗೆ ಕಲ್ಲು ಬೀಳುವುದು ಸಹಜ... ಎಂದು ಸಾರಿಗೆ ಸಚಿವರೂ ಆದ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.

ಬೆಳಗಾವಿ ನಗರದ 3ನೇ ಬಸ್​ ಡಿಪೋದಲ್ಲಿ ಸಾರಿಗೆ ಇಲಾಖೆಯಿಂದ ನಿರ್ಮಿಸಿದ್ದ ವಿಶ್ರಾಂತಿ ಗೃಹ ಉದ್ಘಾಟನೆಗೆಂದು ಶುಕ್ರವಾರ ಖಾಸಗಿ ಕಾರಿನಲ್ಲಿ ಲಕ್ಷ್ಮಣ ಸವದಿ ಬಂದಿದ್ದರು. ಆ ವೇಳೆ ಸವದಿ ಅವರ ಖಾಸಗಿ ಕಾರಿಗೆ ಬಸ್​ ಡಿಪೋದಲ್ಲಿನ ಬಂಕ್​ನಿಂದಲೇ ಅವರ ಚಾಲಕ 44 ಲೀಟರ್​ ಡೀಸೆಲ್​ ಹಾಕಿಸಿಕೊಂಡಿದ್ದರು. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಶನಿವಾರ ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವರು, ಅದು ನನ್ನ ಖಾಸಗಿ ವಾಹನ, ಚಾಲಕನೂ ಖಾಸಗಿಯವನೇ. ನನ್ನ ಕಾರಿಗೆ ಆತ ಸಾರಿಗೆ ಬಸ್​ ಡಿಪೋದಲ್ಲಿ ಡೀಸೆಲ್​ ಹಾಕಿಸಿಕೊಂಡದ್ದು ನಿಜ ಎಂದರು. ಇದನ್ನೂ ಓದಿರಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್​ಐಆರ್​ ದಾಖಲು

ನಮ್ಮ ಚಾಲಕ ಕಾರಿಗೆ ಡೀಸೆಲ್ ಹಾಕಲು ಖಾಸಗಿ ಬಂಕ್ ಬಗ್ಗೆ ವಿಚಾರಿಸಿದ್ದಾರೆ. ಆದರೆ, ಅಲ್ಲಿನ ಸಿಬ್ಬಂದಿ ಹೊರಗೆ ಬೇಡ, ಇಲ್ಲಿಯೇ ಡೀಸೆಲ್ ಹಾಕಿಸಿಕೊಳ್ಳಿ ಎಂದಿದ್ದಾರೆ. ನಮ್ಮ ಚಾಲಕನಿಗೂ ಅರಿವಿಲ್ಲದೆ ಅಲ್ಲಿಯೇ ಡೀಸೆಲ್ ಹಾಕಿಸಿಕೊಂಡಿದ್ದಾನೆ. ನಾನು ಕಾರ್ಯಕ್ರಮ ಮುಗಿಸಿ ಹೊರ ಬಂದ ಬಳಿಕ ವಿಚಾರ ಗೊತ್ತಾಯಿತು. ನಮ್ಮ ಇಲಾಖೆಯ ಡಿಸಿ ಅವರಿಗೂ ಲೋಪದೋಷ ಆಗಿರುವ ಬಗ್ಗೆ ತಿಳಿಸಿದ್ದೇನೆ. ಖಾಸಗಿ ವಾಹನಗಳಿಗೆ ಡೀಸೆಲ್ ಹಾಕಲು‌ ಬರುವದಿಲ್ಲ ಎಂದು ಬಸ್​ ಡಿಪೋದ ಬಂಕ್​ ಮ್ಯಾನೇಜರ್​ ಕೂಡ ಹೇಳಬಹುದಿತ್ತು. ಆದರೆ ಈ ಬಗ್ಗೆ ಹೇಳುವ ಅರಿವು ಆ ಮ್ಯಾನೇಜರ್​ಗೂ ಇಲ್ಲ ಎಂದ ಸಾರಿಗೆ ಸಚಿವರು, 3 ಸಾವಿರ ರೂಪಾಯಿ ಕೊಟ್ಟು ನನ್ನ ಕಾರಿಗೆ ಡೀಸೆಲ್ ಹಾಕಿಸಿಕೊಳ್ಳದಂತಹ ದುರ್ಗತಿ ನನಗೆ ಬಂದಿಲ್ಲ. ಭಗವಂತ ನಮ್ಮ ಮನೆತನವನ್ನ ಉತ್ತಮ ಸ್ಥಿತಿಯಲ್ಲಿಟ್ಟಿದ್ದಾನೆ ಎಂದರು.

ನಿಯಮ ಉಲ್ಲಂಘಿಸಿ ಸಚಿವರ ಕಾರಿಗೆ ಡೀಸೆಲ್ ಹಾಕಿದ್ದನ್ನು ಪ್ರಶ್ನಿಸಿ ವಾ.ಕ.ರ.ಸಾ.ಸಂಸ್ಥೆ ಬೆಳಗಾವಿ 3ನೇ ಘಟಕದ ವ್ಯವಸ್ಥಾಪಕರು ಕಿರಿಯ ಸಹಾಯಕ ಬಿ.ಎಸ್. ಕಿಶೋರ್​ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net