ಮುಂದಿನ ಸಿಎಂ ವದಂತಿಗೆ ಟ್ವೀಟ್​ ಮೂಲಕ ತೆರೆ ಎಳೆದ ಡಿಸಿಎಂ ಲಕ್ಷಣ್​ ಸವದಿ!

01062020 Laxman Savadi
Published on

ಬೆಳಗಾವಿ: ದಿಢೀರ್​ ದೆಹಲಿ ಭೇಟಿ ಹಿನ್ನೆಲೆಯಲ್ಲಿ ಹರಿದಾಡಿದ್ದ ಸಾಕಷ್ಟು ಊಹಾಪೋಹಗಳಿಗೆ ಡಿಸಿಎಂ ಲಕ್ಷ್ಮಣ್​ ಸವದಿ ಟ್ವೀಟ್​ ಮೂಲಕ ತೆರೆ ಎಳೆದಿದ್ದಾರೆ.

ನನ್ನ ದೆಹಲಿ ಭೇಟಿಯ ಬಗ್ಗೆ ಅನಗತ್ಯ ಪ್ರಚಾರ ಬೇಡ ಎಂದು ತಮ್ಮ ಹಿತೈಷಿಗಳು ಮತ್ತು ಮಾಧ್ಯಮದವರಲ್ಲಿ ಮನವಿ ಮಾಡುತ್ತೇನೆ. ದೆಹಲಿಯಲ್ಲಿ ವರಿಷ್ಠರೊಂದಿಗಿನ ಭೇಟಿ ಪೂರ್ವ ನಿರ್ಧಾರಿತವಾಗಿದ್ದ ಕಾರ್ಯಕ್ರಮ. ಅದರ ಬಗ್ಗೆ ಕಲ್ಪಿತ ವರದಿ ದಯವಿಟ್ಟು ಬೇಡ. ನನ್ನ ಕ್ಷೇತ್ರದ ಹಿತೈಷಿಗಳೇ ಸಾಮಾಜಿಕ ಜಾಲತಾಣಗಳಲ್ಲಿ ದಯವಿಟ್ಟು ಆಧಾರ ರಹಿತ ಪೋಸ್ಟ್​ಗಳನ್ನು ಮಾಡದಿರಿ ಎಂದಿದ್ದಾರೆ.

ಕ್ಷೇತ್ರದ ಜನತೆ ಪೋಸ್ಟ್​ಗಳನ್ನು ಹಾಕಿದ್ದಾರೆ ಎನ್ನುತ್ತಾ ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಪ್ರಸಾರ ಮಾಡದಿರುವಂತೆ ಜವಾಬ್ದಾರಿಯುತ ಮಾಧ್ಯಮಗಳಲ್ಲಿ ಮನವಿ ಮಾಡುತ್ತಿದ್ದೇನೆ. ಕೋವಿಡ್ ಸಮಸ್ಯೆಯನ್ನು ಎದುರಿಸಿ ಒಂದು ವರ್ಷ ಉತ್ತಮ ಆಡಳಿತ ನೀಡಿರುವ ನಾವೆಲ್ಲರೂ ಪಕ್ಷಕ್ಕೆ ನಿಷ್ಠರು ಹಾಗೂ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರು. ಮಾಧ್ಯಮ ಮಿತ್ರರ ಸಹಕಾರ ಅತ್ಯವಶ್ಯಕ. ವಸ್ತು ನಿಷ್ಠ ವರದಿ ನಿಮ್ಮದಾಗಿರುತ್ತದೆ ಎಂಬ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.

ರಾಜಕೀಯ ವಿಪ್ಲವಗಳ ಬಗ್ಗೆ ಮಾಧ್ಯಮಗಳು ಅಪ್ರಬುದ್ಧ ವಿಶ್ಲೇಷಣೆಯಲ್ಲಿ ತೊಡಗುವುದು ಸಾಮಾಜಿಕ ಸ್ವಾಸ್ಥ್ಯಕ್ಕೆ ಹಾನಿಕರವಾಗಿದೆ. ನಮ್ಮ ಲಕ್ಷ್ಯ ಆರೋಗ್ಯ ಕ್ರಾಂತಿಯ ಕಡೆಗೆ ಇರಬೇಕಾದ ಹೊತ್ತಿದು. ಸ್ವಾಸ್ಥ್ಯವನ್ನು ಕಾಪಾಡಿಕೊಂಡು, ಬಹುಬೇಗ ಒದಗಿರುವ ಮಹಾಮಾರಿಯ ಸಂಕಟದಿಂದ ಹೊರಬರಬೇಕಾಗಿರುವ ಸಮಯ. ಮಾಧ್ಯಮ ಮಿತ್ರರ ಆದ್ಯತೆಯು ಅದೇ ಆಗಿರಲಿ ಎಂಬ ಆಶಯ ನನ್ನದು ಎಂದಿದ್ದಾರೆ.

ದೆಹಲಿ ಭೇಟಿ ಹಿನ್ನಲೆಯಲ್ಲಿ ಮುಂದಿನ ಸಿಎಂ ಲಕ್ಷ್ಮಣ ಸವದಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಅಭಿಮಾನಿಗಳು ಪೋಸ್ಟ್​ ಹಾಕಿದ್ದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net