

ಯಳಂದೂರು: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆಯಲು ಯತ್ನಿಸಿರುವುದನ್ನು ಖಂಡಿಸಿ ಪಟ್ಟಣದ ನ್ಯಾಯಾಲಯದ ಮುಂಭಾಗ ತಾಲೂಕು ವಕೀಲರ ಸಂಘದ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಹಿರಿಯ ವಕೀಲ ಬಸವಟ್ಟಿ ಮಹದೇವಸ್ವಾಮಿ ಮಾತನಾಡಿ, ಮುಖ್ಯ ನಾಯಮೂರ್ತಿ ಬಿ.ಆರ್.ಗವಾಯಿ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆಯಲು ಯತ್ನಿಸಿರುವುದು ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಸನಾತನ ಧರ್ಮ ಎಂದರೆ ಚತುರ್ವಣ ವ್ಯವಸ್ಥೆಯೇ, ಮನುಧರ್ಮ ಶಾಸ್ತ್ರವೇ? ಸುಪ್ರೀಂ ಕೋರ್ಟ್ ಈ ಹಿಂದೆಯೇ ಹಿಂದು ಧರ್ಮವು ಧರ್ಮವೇ ಅಲ್ಲ ಇದೊಂದು ಜೀವನ ವಿಧಾನ ಎಂದು ಹೇಳಿದೆ. ಪ್ರತಿ ಧರ್ಮಕ್ಕೂ ಧರ್ಮಗುರು ಉಂಟು. ಹಿಂದು ಧರ್ಮದ ಹೆಸರಿನಲ್ಲಿ ಕೆಲವರು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಸಂವಿಧಾನದ ಪ್ರಕಾರ ಮನುಷ್ಯ ಮನುಷ್ಯನಾಗಿ ನೋಡುವುದೇ ಧರ್ಮವಾಗಿದೆ. ಈ ಕೃತ್ಯ ಸಂವಿಧಾನ ವಿರೋಧಿ, ದೇಶದ್ರೋಹಿ ಕೃತ್ಯ, ನ್ಯಾಯಾಂಗ ನಿಂದನೆ. ಆತನ ವಿರುದ್ಧ ಶಿಕ್ಷೆಯಾಗಬೇಕು. ಆತನನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಅಧ್ಯಕ್ಷ ಎಂ.ರಾಜಣ್ಣ ಮಾತನಾಡಿ, ಈ ಕೃತ್ಯವನ್ನು ಖಂಡಿಸಿ ನಾವು ನ್ಯಾಯಾಲಯದ ಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸಿದ್ದೇವೆ. ಇದು ಘೋರ ಅಪರಾಧವಾಗಿದೆ. ಕಾನೂನಿನ ಚೌಕಟ್ಟು ಅರಿತ ವ್ಯಕ್ತಿ ಈ ಕೃತ್ಯ ಮಾಡಿರುವುದು ಅತ್ಯಂತ ದುರಂತವಾಗಿದೆ. ಇದನ್ನು ಖಂಡಿಸಿ ಈತನ ವಿರುದ್ಧ ಕಾನೂನು ಕ್ರಮ ವಹಿಸಬೇಕು ಎಂದರು.
ವಕೀಲರ ಸಂಘದ ಉಪಾಧ್ಯಕ್ಷ ಕಾಂತರಾಜು, ಕಾರ್ಯದರ್ಶಿ ಕುಮಾರಸ್ವಾಮಿ, ಪಿ. ನಾಗರಾಜು, ಅಂಬಳೆ, ಸಿ.ಎಂ. ಮಹದೇವಸ್ವಾಮಿ, ಅಂಬಳೆ ಸಿದ್ದರಾಜು, ಕೆ.ಬಿ.ಶಶಿಧರ್, ಸಿ.ಎನ್. ನಾಗರಾಜು, ಶಾಂತರಾಜು, ಎಂ. ರವೀಶ್, ಮಹದೇಶ್‌ಕುಮಾರ್, ಸಂಪತ್ತು, ಎಂ.ಎನ್. ನಾಗರಾಜು, ಅಶ್ವಿನ್‌ಕುಮಾರ್, ಶ್ರೀನಿವಾಸಮೂರ್ತಿ, ಸಿ. ನಂಜುಂಡಸ್ವಾಮಿ, ಎಂ. ಕುಮಾರಸ್ವಾಮಿ, ನಾಗರತ್ನ, ಚಂದನ ಇತರರು ಇದ್ದರು.