ಮ್ಯಾಜಿಸ್ಟ್ರೇಟ್ ಆವರಣದಲ್ಲೇ ವಕೀಲರ ಮೇಲೆ ಹಲ್ಲೆ ಮಾಡಿದ ಮಹಿಳೆ!; ಆಗಿದ್ದೇನು?

Crime symbolic photo
Published on

ಬೆಂಗಳೂರು: ನೃಪತುಂಗ ರಸ್ತೆಯಲ್ಲಿರುವ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣದಲ್ಲಿ ವಕೀಲರೊಬ್ಬರ ಮೇಲೆ ಮಹಿಳೆ ಚಾಕುವಿನಿಂದ ಹಲ್ಲೆ ನಡೆಸಿದ್ದಾಳೆ. ಆರ್.ಟಿ.ನಗರದ ವಿ. ಕೃಷ್ಣರೆಡ್ಡಿ (58) ಹಲ್ಲೆಗೆ ಒಳಗಾದ ವಕೀಲರು. ಇವರು ನೀಡಿದ ದೂರಿನ ಮೇರೆಗೆ ಆರೋಪಿ ದೊಡ್ಡಬಿದರಕಲ್ಲು ನಿವಾಸಿ ಕಾಂಚನ ನಾಚಪ್ಪ (35) ವಿರುದ್ಧ ಹಲಸೂರು ಗೇಟ್ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲು ಮಾಡಿ ಬಂಧನಕ್ಕೆ ಬಲೆಬೀಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ಯೂಟಿಪಾರ್ಲರ್ ನಡೆಸುತ್ತಿದ್ದ ಕಾಂಚನ 2019ರಲ್ಲಿ ಹರೀಶ್ ಎಂಬುವರ ಬಳಿ ಚೆಕ್ ಕೊಟ್ಟು 4.5 ಲಕ್ಷ ರೂ. ಸಾಲ ಪಡೆದಿದ್ದು, ವಾಪಸ್ ಕೊಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಹರೀಶ್ ಪರ ವಕೀಲ ಕೃಷ್ಣ ರೆಡ್ಡಿ, ಕೋರ್ಟ್‌ನಲ್ಲಿ ಚೆಕ್ ಬೌನ್ಸ್ ಕೇಸ್ ದಾಖಲಿಸಿದ್ದರು. ವಾದ-ಪ್ರತಿವಾದ ನಡೆಯುತ್ತಿದ್ದು, ಕಾಂಚನ ಸಂಧಾನ ಮಾಡಿಕೊಳ್ಳುವುದಾಗಿ ಸಮಯ ಕೇಳುತ್ತಿದ್ದರು.

ಶುಕ್ರವಾರ ಸಂಧಾನ ಮಾಡಿಕೊಳ್ಳುವುದಿಲ್ಲ ಎಂದಾಗ ಕೃಷ್ಣ ರೆಡ್ಡಿ, ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದರು. ಕೋರ್ಟ್ ಮೇ 8ಕ್ಕೆ ಮುಂದೂಡಿತ್ತು. ಇದರಿಂದ ಕುಪಿತಗೊಂಡ ಕಾಂಚನ, ಹೊರಬಂದು ಕೃಷ್ಣ ರೆಡ್ಡಿಯನ್ನು ಪ್ರಶ್ನಿ ಮಾಡಿ ಚಾಕುವಿನಿಂದ ಹಲ್ಲೆ ನಡೆಸಿ ಅಲ್ಲಿಂದ ಓಡಿ ಹೋಗಿದ್ದಾರೆ. ಗಾಯಾಳು ವಕೀಲರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಾಣಕ್ಕೆ ಯಾವುದೇ ಅಪಾಯ ಇಲ್ಲವೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net