ಸಚಿವ ಮಾಧುಸ್ವಾಮಿ ಆಸ್ತಿ 5 ವರ್ಷಗಳಲ್ಲಿ 7 ಪಟ್ಟು ವೃದ್ಧಿ !

JCM_Web
Published on

ತುಮಕೂರು: ಕಾನೂನು ಸಚಿವ, ಚಿಕ್ಕನಾಯಕನಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೆ.ಸಿ.ಮಾಧುಸ್ವಾಮಿ ಕುಟುಂಬದ ಚರ-ಸ್ಥಿರಾಸ್ತಿಯ ಒಟ್ಟು ಮೌಲ್ಯ ಏಳು ಪಟ್ಟು ಹೆಚ್ಚಾಗಿದೆ. 5 ವರ್ಷಗಳ ಹಿಂದೆ ಕುಟುಂಬದ ಒಟ್ಟು ಚರ-ಸ್ಥಿರಾಸ್ತಿ 4.13 ಕೋಟಿ ಇದಿದ್ದು ಈ ಬಾರಿ 27.05 ಕೋ.ರೂ.,ನಷ್ಟು ಹೆಚ್ಚಿರುವುದು ನಿಷ್ಠೂರವಾದಿ ನಡೆಯು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಟಿಎಂಸಿಸಿ ಬ್ಯಾಂಕ್‌ನಲ್ಲಿ ಮಾಧುಸ್ವಾಮಿ 7.27 ಕೋ.ರೂ., ಹಾಗೂ ಅವರ ಪತ್ನಿ ತ್ರಿವೇಣಿ 10.50 ಕೋ.ರೂ., ಸಾಲ ಹೊಂದಿದ್ದಾರೆ.

ವಿವಿಧ ಬ್ಯಾಂಕ್‌ಗಳಲ್ಲಿರುವ ಠೇವಣಿ, ಉಳಿತಾಯ, ಮ್ಯುಚುಯೆಲ್ ಫಂಡ್, ಡಿಬೆಂಚರ್‌ಗಳಲ್ಲಿ ಜೆಸಿಎಂ ಹಾಗೂ ಅವರ ಪತ್ನಿ ತ್ರಿವೇಣಿ ಹಣ ಹೂಡಿದ್ದು ಇದರ ಜತೆಗೆ ಚಿನ್ನಾಭರಣ, ಟಯೋಟಾ ಫಾರ್ಚೂನರ್, ಟ್ರಾೃಕ್ಟರ್, ನಿಸ್ಸಾನ್ ಕಾರು ಎಲ್ಲವೂ ಸೇರಿ ಚರಾಸ್ತಿಯ ಒಟ್ಟು ಮೌಲ್ಯ 26232181 ರೂ.,!

ಜೆಸಿಎಂ ಹೆಸರಲ್ಲಿ 83.25 ಎಕರೆ ಹಾಗೂ ಪತ್ನಿ ಹೆಸರಲ್ಲಿ 47.20 ಎಕರೆ ಕೃಷಿ ಭೂಮಿ ಖರೀದಿಸಿದ್ದು ಸಕಲೇಶಪುರದ ಯಳಸೂರಿನಲ್ಲಿ ಹೆಚ್ಚು ಜಮೀನು ಖರೀದಿಸಲಾಗಿದೆ. ಸಚಿವರಾದ ಬಳಿಕ ಕೃಷಿ, ಕೃಷಿಯೇತರ ಭೂಮಿ ಖರೀದಿ ವ್ಯಾಪಕವಾಗಿ ಮಾಡಿದ್ದಾರೆ. ಜೆಸಿಎಂ ಹೆಸರಲ್ಲಿ ಜೆ.ಸಿ.ಪುರದಲ್ಲಿ ಪಿತ್ರಾರ್ಜಿತವಾಗಿ ಬಂದಿದ್ದ, ವಾಸದ ಮನೆ, ಮೈಸೂರು ಹಾಗೂ ಬೆಂಗಳೂರು ಸಂಜಯ್‌ನಗರದಲ್ಲಿ ಅಪಾರ್ಟ್‌ಮೆಂಟ್ ಕೂಡ ಇದೆ. ಒಟ್ಟು ಸ್ವಯಾರ್ಜಿತ, ಪಿತ್ರಾರ್ಜಿತ ಎಲ್ಲವೂ ಸೇರಿ 9.29 ಕೋ.ರೂ., ಆಸ್ತಿ ಹೊಂದಿದ್ದಾರೆ.

ಬೆಂಗಳೂರಿನ ರಾಜಮಹಲ್ ವಿಲಾಸ್‌ನಲ್ಲಿ 4.91 ಕೋ.ರೂ., ನಿವೇಶನ, ಮನೆ, ಪೀಣ್ಯ ಇಂಡಸ್ಟ್ರಿಯಲ್ ಏರಿಯಾ ಬಳಿ 4 ಕೋಟಿ ಮೌಲ್ಯದ ಸ್ಥಿರಾಸ್ತಿ ಸೇರಿ ವಿವಿಧೆಡೆ ಭೂಪರಿವರ್ತನೆ ಮಾಡಿರುವುದು ಸೇರಿ ಪತ್ನಿ ಹೆಸರಲ್ಲಿ 15,14,03,731 ರೂ., ಒಟ್ಟು ಸ್ಥಿರಾಸ್ತಿ ಖರೀದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net