ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮುಖ್ಯ

IMG-20240709-WA0265
Published on

ಅರಸೀಕೆರೆ ಗ್ರಾಮಾಂತರ: ಕಾನೂನು ಅರಿವು ಇಲ್ಲದ ಕಾರಣ ವಿದ್ಯಾರ್ಥಿಗಳು ನ್ಯಾಯಾಲಯದ ಮೆಟ್ಟಿಲೇರುವಂತಾಗಿದೆ ಎಂದು ಜೆಎಂಎಫ್‌ಸಿ ನ್ಯಾಯಾಧೀಶ ಸಂದೇಶ್ ವಿ.ಭಂಡಾರಿ ಹೇಳಿದರು.


ಬಾಣಾವರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಪೋಕ್ಸೋ ಕಾಯ್ದೆ ಕುರಿತ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಎಷ್ಟೋ ವಿದ್ಯಾರ್ಥಿಗಳಿಗೆ ಇಂದು ಕಾನೂನು ಜ್ಞಾನವಿಲ್ಲ. ಅರಿವಿದ್ದೋ, ಇಲ್ಲದೆಯೋ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದ ಮೆಟ್ಟಿಲು ಹತ್ತುವಂತಾಗಿದೆ. ಹಾಗಾಗಿ ಕಾನೂನು ಅರಿವು ಅಗತ್ಯ ಎಂದರು.


ಬಾಣಾವರ ಠಾಣೆ ಎಎಸ್‌ಐ ಗಂಗಾಧರಪ್ಪ ಮಾತನಾಡಿ, ವಿದ್ಯಾರ್ಥಿಗಳು ಕಾನೂನು ಜ್ಞಾನ ಹೊಂದುವುದು ಅಗತ್ಯ. ಯಾವುದೇ ರೀತಿಯ ಕಾನೂನು ಉಲ್ಲಂಘನೆ ಮಾಡಿರುವ ಕೃತ್ಯಗಳು ಕಂಡು ಬಂದಲ್ಲಿ 112 ನಂಬರ್‌ಗೆ ಕರೆ ಮಾಡಿ ನೆರವು ಪಡೆದುಕೊಳ್ಳಬಹುದು ಎಂದು ಹೇಳಿದರು.


ವಕೀಲರ ಸಂಘದ ಅಧ್ಯಕ್ಷ ರೂಪರಾಜ್ ಮಾತನಾಡಿ, ಅಪ್ರಾಪ್ತರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಪೋಕ್ಸೋ ಕಾಯ್ದೆ ಜಾರಿಗೊಳಿಸಲಾಗಿದೆ. ಇಂತಹ ಕಾಯ್ದೆಗಳ ಬಗ್ಗೆ ಅರಿವಿರಬೇಕು. ಯಾವುದೇ ರೀತಿಯ ಅಪರಾಧ ಕೃತ್ಯಗಳನ್ನು ಮಾಡದಂತೆ ಎಚ್ಚರ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಂಶುಪಾಲ ಬಿ.ವಿ.ಕುಮಾರ್, ಉಪಪ್ರಾಂಶುಪಾಲ ವಾಸುದೇವ್, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net